ADVERTISEMENT

ಯುದ್ಧ ಗೆದ್ದು ಬನ್ನಿ

ಮಣ್ಣೆ ರಾಜು
Published 26 ನವೆಂಬರ್ 2019, 19:36 IST
Last Updated 26 ನವೆಂಬರ್ 2019, 19:36 IST
churumuri 27-11-2019
churumuri 27-11-2019   

ಮಂತ್ರಿಮಾನ್ಯರ ಒಡ್ಡೋಲಗದಲ್ಲಿ ಯಡಿಯೂರೇಶ್ವರ ಮಹಾರಾಜರು, ‘ಇದು ಕೊನೇ ಸಭೆ ಆಗದಿರಲಿ’ ಎಂದು ಗದ್ಗದಿತರಾದರು.

ಉಪಸಮರದ ರಣಕಹಳೆ ಮೊಳಗಿತ್ತು. ಸಿದ್ದರಾಮ ಪ್ರಭು, ಕುಮಾರದೇವ ರಾಜರು ಸಮರ ಸಾರಿದ್ದರು. 15 ಪ್ರಾಂತಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿ, ಸಿಂಹಾಸನ ಭದ್ರಪಡಿಸಿ ಕೊಳ್ಳುವ ಜೊತೆಗೆ, ತಮಗೆ ಅಂಟಿರುವ ಆಪರೇಷನ್ ಅಪವಾದದಿಂದ ಮುಕ್ತರಾಗಿ ಸ್ವಂತ ಬಲದ ಮೇಲೆ ಸಾಮ್ರಾಜ್ಯ ಕಟ್ಟುವ ಅನಿವಾರ್ಯ ಮಹಾರಾಜರಿಗೆ ಎದುರಾಗಿತ್ತು.

‘ಮಂತ್ರಿಗಳೆಲ್ಲಾ ಸೇನಾಧಿಪತಿಗಳಾಗಿ ರಣರಂಗಕ್ಕೆ ಧುಮುಕಿ ಹೋರಾಡಿ ಗೆಲುವು ತರಬೇಕು’ ಎಂದು ಆಜ್ಞೆ ಮಾಡಿದರು.

ADVERTISEMENT

‘ಪ್ರಭು, ನಾವು ವೀರರು, ಎಷ್ಟೋ ಯುದ್ಧ ಗಳನ್ನು ಗೆದ್ದ ಅನುಭವಿಗಳು. ಈ ಯುದ್ಧವನ್ನೂ ಗೆದ್ದು ಸಾಮ್ರಾಜ್ಯ ಉಳಿಸುತ್ತೇವೆ. ಆದರೆ, ಗೆಲುವಿಗೆ ಕಾಲ್ತೊಡಕಾಗಿರುವ ಒಳಶತ್ರುಗಳ ಸಂಹಾರ ತಮ್ಮ ಹೊಣೆ’ ಮಂತ್ರಿಯೊಬ್ಬರು ಸಂಕಟ ತೋಡಿಕೊಂಡರು.

‘ಹೌದು ಪ್ರಭು, ಹೊರಶತ್ರುಗಳನ್ನು ನಾವು ದಮನ ಮಾಡುತ್ತೇವೆ, ಒಳಶತ್ರುಗಳ ಶಮನ ತಮ್ಮ ಹೊಣೆ’ ಎಂದರು.

‘ಅದರ ಚಿಂತೆ ಬೇಡ. ನೀವು ಔಟ್ ಡೋರ್ ಗೇಮ್ ಆಡಿ, ನಾನು ಇನ್‌ಡೋರ್ ಗೇಮ್ ಆಡುತ್ತೇನೆ’.

‘ಆಗಲಿ ಪ್ರಭು, ಗದಾಯುದ್ಧ, ಮಲ್ಲಯುದ್ಧ, ಬಿಲ್ಲು- ಬಾಣ, ಕತ್ತಿವರಸೆ ಯಾವ ಮಾದರಿ ಯುದ್ಧಕ್ಕೂ ನಾವು ಸಿದ್ಧ’ ಮಂತ್ರಿಗಳು ವೀರಾವೇಶ ತೋರಿದರು.

‘ಗದೆ, ಒದೆ, ಕತ್ತಿವರಸೆಯ ಯುದ್ಧವಲ್ಲ ಇದು. ನಾಲಿಗೆ ಹೊರತಾಗಿ ಯಾವುದೇ ಅಸ್ತ್ರ ಬಳಸಬೇಡಿ. ಆಶ್ವಾಸನೆಯ ವಾಗ್ಬಾಣ, ಭರವಸೆಯ ವರಸೆ ಪ್ರಯೋಗಿಸಿ’.

‘ಅರ್ಥವಾಯಿತು ಪ್ರಭು. ನಾವು ನಾಲಿಗೆ ಹರಿತ ಮಾಡಿಕೊಂಡು ಯುದ್ಧಕ್ಕೆ ಹೊರಡುತ್ತೇವೆ’.

‘ನಾಲಿಗೆಯನ್ನು ಬೇಕಾಬಿಟ್ಟಿ ಹರಿಬಿಡಬೇಡಿ, ಹಿಡಿತವಿರಲಿ. ಆಚಾರವಿಲ್ಲದ ನಾಲಿಗೆ ಗ್ರಹಚಾರ ಕೆಡಿಸಿಬಿಡುತ್ತದೆ... ಹೊರಡಿ, ಯುದ್ಧ ಗೆದ್ದು ಬನ್ನಿ...’ ಮಂತ್ರಿಗಳ ಹಣೆಗೆ ವೀರ ತಿಲಕವಿಟ್ಟು ಮಹಾರಾಜರು ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.