ADVERTISEMENT

ದೇವರ ದುಡ್ಡು!

ಲಿಂಗರಾಜು ಡಿ.ಎಸ್
Published 30 ಡಿಸೆಂಬರ್ 2019, 19:45 IST
Last Updated 30 ಡಿಸೆಂಬರ್ 2019, 19:45 IST
31-12-2019 Churumuri
31-12-2019 Churumuri   

ತುರೇಮಣೆ ಬೇಜಾರಲ್ಲಿ ಕೂತಿದ್ದರು. ನಾನು ಒಳಗೆ ಬಂದೋನೆ ‘ಏನ್ಸಾರ್ ಹೆಂಗಿದೀರಾ?’ ಅಂತ ಕೇಳಿದೆ. ತಲೆ ಎತ್ತಿ ನನ್ನ ಮುಖ ನೋಡಿದೋರೆ ‘ನೋಡಪ್ಪ ಹಿಂಗಿದೀನಿ ಕಪ್ಪಟ್ಟೆ ಕರ‍್ರಗೆ!’ ಅಂದರು. ಅವರೇನು ನನಗೆ ಬೈದ್ರಾ ಇಲ್ಲ ಸುಮ್ಮಗೆ ಹಂಗಂದ್ರಾ ಗೊತ್ತಾಗಲಿಲ್ಲ.

‘ಯಾಕಿಂಗೆ ಮುಖ ಇಳಿಬುಟ್ಟುಕಂಡು ಕುಂತುದರಿ?’ ಅಂತ ವಿಚಾರಿಸಿದೆ.

‘ಏನು ಮಾಡನ್ಲಾ, ಕಾಸಿಲ್ದೆ ಕೈಲಾಸ ಆಗದೆ’ ಅಂದ್ರು.

ADVERTISEMENT

‘ನಮೋ ದ್ಯಾನ ಮಾಡಿ ಸಾ’ ಅಂದೆ. ‘ಅದುನ್ನು ಮಾಡ್ದೆ ಕಲಾ, ನೆನ್ನೆ ನಮೋ ಭಗವಾನ್ ಪ್ರತ್ಯಕ್ಷ ಆಗಿ ‘ಏನು ಬೇಕ್ಲಾ ಹೈವಾನ್’ ಅಂತ ಕೇಳದಾ!’ ಅಂದ್ರು. ನಾನು ‘ಸಾ ನೀವೇನು ಕೇಳಿದ್ರಿ?’ ಅಂದೆ ಆಶ್ಚರ್ಯದಲ್ಲಿ.

‘ಅಲ್ಲಾ 2020ನೇ ವರ್ಸ ಬಂದ್ರೂ ದೇಶದ 137 ಕೋಟಿ ಜನಕ್ಕೆ ಇನ್ನೂ 15-15 ಲಕ್ಸ ಬಾಕಿ ಇದ್ದೀಯಲ್ಲಾ ತಂದೆ’ ಅಂದೇಟಿಗೆ ನಮೋ ‘ಎಲ್ಲಾರಿಗೂ 15 ಲಕ್ಸ ಕೊಟ್ರೆ ಭಾರತದ ಆರ್ಥಿಕ ಶಿಸ್ತು ಎಕ್ಕುಟ್ಟೋಯತದೆ. ನಮ್ಮದಿನ್ನೂ ಬಜೆಟ್ ಆಗಿಲ್ಲ ಕಕವ’ ಅಂದ್ರು.

‘ಆಮೇಲೇನಾಯ್ತು ಸಾರ್?’ ಅಂತ ಕೇಳಿದೆ ಕುತೂಹಲದಿಂದ.

‘ಎಲ್ಲಾರಿಗೂ ಕೊಡಕ್ಕೆ ಅದೇನು ಈರುಳ್ಳಿ ಅಲ್ಲ. ನಿನ್ನ ಅಕೌಂಟಿಗೆ 15 ಲಕ್ಸ ಟ್ರಾನ್ಸ್‌ಫರ್ ಮಾಡ್ತೀನಿ ತಗೋ ಮೂದೇಯ್’ ಅನ್ನದಾ ದೇವರು’ ಅಂದ ತುರೇಮಣೆ ಮಾತಿಗೆ ನಾನು ‘ಸಾರ್ ಆಮೇಲೆ?’ ಅಂತ ಕೇಳಿದೆ.

‘ಆಯ್ತು ಬಡ್ಡಿಹೈದ್ನೆ ತಥಾಸ್ತು ಅಂದು ದೇವರು ಎಟಿಎಂ ಕಾರ್ಡು ಕೊಟ್ಟು ಕಡದೋದ್ರಾ, ಇ.ಡಿಯೋರು 15 ಲಕ್ಸ ಎಲ್ಲಿಂದ ಬಂತು ಅಂತ ಕೆತ್ತೆಬಜೆ ಶುರು ಮಾಡಿದ್ರು. ನಾನು ನಿಮ್ಮ ಕೆಲಸ ಎಷ್ಟದೋ ಅದನ್ನ ಮಾಡಿ ರಾಜಕೀಯ ಬ್ಯಾಡ ಅಂದೆ ಚಿದಂಬ-ರಂ ಥರಾ. ಇಲ್ಲಿ ನೋಡಿದ್ರೆ ದೇವರು ಪಾಸ್‍ವರ್ಡೇ ಕೊಡ್ಲಿಲ್ಲ. ನಾನು 15 ಲಕ್ಸ ತಗಿಯದೆಂಗೆ?’ ಅಂತ ಮತ್ತೆ ಖಿನ್ನರಾದರು. ಇದೊಂಥರಾ ಎಲೆಕ್ಸನ್ ಗೆದ್ರೂ ಮಂತ್ರಿ ಪದವಿ ಸಿಗದಿರೋ ಶಾಸ್ಕರ ಕಥೆ ಆದಂಗಾಯ್ತಲ್ಲವರಾ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.