ADVERTISEMENT

ಇತಿಹಾಸಜ್ಞರಿಗೆ ತಿಳಿಯುತ್ತೆ ಮನ್‌ ಕಿ ಬಾತ್ !

ಗುರು ಪಿ.ಎಸ್‌
Published 13 ಡಿಸೆಂಬರ್ 2018, 20:01 IST
Last Updated 13 ಡಿಸೆಂಬರ್ 2018, 20:01 IST
   

ಆರ್‌ಬಿಐನ ಹುಲಿ ಮತ್ತು ಸೆನ್ಸೆಕ್ಸ್‌ನ ಗೂಳಿ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ನಿಂತ್ಕೊಂಡು ಗಹನ ಚರ್ಚೆಯಲ್ಲಿ ತೊಡಗಿದ್ದವು. ಇತ್ತೀಚೆಗೆ, ಆರ್‌ಬಿಐ ಮತ್ತು ಷೇರುಪೇಟೆ ಎರಡರಲ್ಲೂ ಏರಿಳಿತ ಸಾಮಾನ್ಯ ಎನ್ನುವಂತಾಗಿರುವುದರಿಂದ, ಅದರ ಬಗ್ಗೆಯೇ ಮಾತುಕತೆ ನಡೆಯುತ್ತಿರಬಹುದು ಎಂದುಕೊಂಡ ನಾನು ಅತ್ತ ಕಿವಿಗೊಟ್ಟು ನಿಂತೆ.

‘ಏನ್ ಹುಲಿಯಣ್ಣ, ಖುಷಿಯಾಗಿದೆಯಾ... ಏನ್ ಸಮಾಚಾರ...’ ಕೇಳಿತು ಗೂಳಿ.

‘ಹಿಸ್ಟರಿ ಓದಿರೋ ಒಬ್ರು ಆರ್‌ಬಿಐ ಗವರ್ನರ್ ಆಗಿರೋದಕ್ಕೆ ಖುಷಿ ಆಗ್ತಿದೆ. ಆರ್‌ಬಿಐ ಲಾಂಛನದಲ್ಲಿ ನಾನಿರುವುದು ಸಾರ್ಥಕ ಅನಿಸ್ತಿದೆ ಈಗ’ ಎಂದು ಮುಖ ಅರಳಿಸಿತು ಹುಲಿ.

ADVERTISEMENT

‘ಏನ್ ಹೇಳ್ತಿದಿಯೋ ಅರ್ಥ ಆಗ್ತಿಲ್ಲ’ ಗೂಳಿ ತಲೆ ಅಲ್ಲಾಡಿಸಿತು.

‘ಈ ಎಕನಾಮಿಕ್ಸು, ಮ್ಯಾಥ್ಸು ಓದಿದೋರು ಬರೀ ಲೆಕ್ಕಾಚಾರ ಮಾಡ್ತಾರೆ. ಎಲ್ಲ ಟ್ಯಾಲಿ ಆಯ್ತಾ ಅಂತಾ ಚೆಕ್ ಮಾಡ್ತಿರ್ತಾರೆ. ಅದೇ ಇತಿಹಾಸ ಓದಿದೋರಿಗಾದ್ರೆ ‘ಮನ್ ಕಿ ಬಾತ್’ ಚೆನ್ನಾಗಿ ಅರ್ಥ ಆಗುತ್ತೆ. ಅವರಿಗೆ ಕಥೆ ಕೇಳೋದಕ್ಕೂ ಬರುತ್ತೆ, ಹೇಳೋದಕ್ಕೂ ಬರುತ್ತೆ. ಅಲ್ಲದೆ, ಮಹಾರಾಜರಿಗೆ ಹೇಗೆ ‘ದಾಸ’ರಾಗಿರಬೇಕು ಅನ್ನೋದೂ ಗೊತ್ತಿರುತ್ತೆ...’ ಮೀಸೆಯಡಿ ನಕ್ಕ ಹುಲಿರಾಯ.

‘ಈ ಜಿಎಸ್‌ಟಿ, ಡಿಮಾನಿಟೈಸೇಷನ್ನು, ಡಿವ್ಯಾಲ್ಯೂಯೇಷನ್ನು, ಬ್ಯಾಂಕ್ ಫ್ರಾಡು... ಅಂತೆಲ್ಲ ಏನೇನೋ ಇವೆ. ಹಿಸ್ಟರಿ ಸರ್‌ಗೆ ಇವೆಲ್ಲ ಗೊತ್ತಾಗುತ್ತಾ?’ ಗೂಳಿ ಪ್ರಶ್ನೆ ಮುಂದುವರಿಸಿತು.

‘ಎಲ್ಲರಂತೆ ನೀನೂ ದಡ್ಡನ ರೀತಿ ಮಾತನಾಡಬೇಡ. ಅರ್ಥಶಾಸ್ತ್ರ ಓದಿದೋರು ಸರ್ಕಾರವನ್ನ ಅರ್ಥಾನೇ ಮಾಡಿಕೊಳ್ಳಲಿಲ್ಲ. ಅದಕ್ಕೆ ಇತಿಹಾಸ ಓದಿದೋರನ್ನ ಮಾಡಿದ್ರೆ ಬ್ಯಾಂಕ್‌ನ ಇತಿಹಾಸ ಆದರೂ ಬರೀತಾರೆ ಅಂತಾ ತಂದು ಕೂರಿಸಿದ್ದಾರೆ’ ಎಂದು ಕತ್ತು ಮೇಲಕ್ಕೆತ್ತಿ ಕುಳಿತಿತು ಟೈಗರ್.

ಪಾತಾಳಕ್ಕಿಳಿದ ಸೆನ್ಸೆಕ್ಸ್, ರೂಪಾಯಿ ಮೌಲ್ಯ ಕುಸಿತ ಎಂಬ ನಿರ್ಭಾವುಕ ಪದಗಳತ್ತ ಗೂಳಿ-ಹುಲಿಯ ಚಿತ್ತ ಹೋಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.