ADVERTISEMENT

ಚುರುಮುರಿ: ಜೋಡೊ- ಜೋಡಿ

ನಾರಾಯಣ ರಾಯಚೂರ್
Published 4 ಜನವರಿ 2023, 19:45 IST
Last Updated 4 ಜನವರಿ 2023, 19:45 IST
ಚುರುಮುರಿ: ಜೋಡೊ- ಜೋಡಿ
ಚುರುಮುರಿ: ಜೋಡೊ- ಜೋಡಿ   

‘ರೀ, ನಾನು ಹೊಸದಾಗಿ ಸೇರಿಕೊಂಡಿದಿನಲ್ಲಾ, ಆ ನಡಿಗೆದಾರರ ಸಂಘದ ಚಲಪತಿ ರಾವ್ ಅವರು ಹೇಳ್ತಾ ಇದ್ರು ವಾಕ್ ಮಾಡೋದರಿಂದ ಏನೆಲ್ಲಾ ಪ್ರಯೋಜನ ಅಂತ’.

‘ವೇಟ್ ಕಮ್ಮಿ ಮಾಡ್ಕೋಳೋದು ಅಂತ ತಾನೇ?! ಊಟ ಕಮ್ಮಿ ಮಾಡ್ಕೊಂಡೂ ಮಾಡ್ಕೋಬಹುದು...’

‘ಅಷ್ಟೆ ಅಲ್ಲಾರೀ... ನಿರ್ಧಾರ ತಗೋಳೊ ಅಂಥ ಗಟ್ಟಿ ಮನಸು ಮಾಡೋಕೂ ನಡಿಗೆ ಉಪಯುಕ್ತ ಅಂತೆ’.

ADVERTISEMENT

‘ಚಲನೆ ಅನ್ನೋದು ಚಂಚಲ, ನಿರ್ಧಾರ ಅನ್ನೋದು ಸ್ಥಿರ... ಎತ್ತಣಿಂದೆತ್ತ ಸಂಬಂಧವಯ್ಯಾ!’

‘ಸಂಬಂಧದ ವಿಚಾರವೇ ಅವರೂ ಹೇಳಿದ್ದು. ಪಾದಯಾತ್ರೆ ಮಾಡ್ತಿರೊ ಬ್ಯಾಚುಲರ್ ರಾಹುಲ್ ಗಾಂಧಿ, ಪಾದಯಾತ್ರೆಯ ಶತದಿನೋತ್ಸವಾನೂ ಮುಗಿಸಿ, ಹೆಜ್ಜೆಯಿಂದ ಹೆಜ್ಜೆಗೆ ಸ್ಟ್ರಾಂಗ್ ಆಗಿ, ‘ಅಜ್ಜಿ ಇಂದಿರಾ ಗಾಂಧಿ ಹಾಗೂ ಅಮ್ಮ ಸೋನಿಯಾ ಅವರಂತಹ ಗುಣ-ಲಕ್ಷಣದ ಹುಡುಗಿ ಸಿಕ್ಕರೆ ಮದುವೆಗೆ ಸಿದ್ಧ’ ಅಂದಿದಾರಂತೆ’.

‘ಕನ್ಯಾಕುಮಾರಿಯಿಂದ ಪಾದಯಾತ್ರೆ ಶುರು ವಾದಾಗಲೇ ಅನ್ಕೊಂಡಿದ್ದೆ, ತಮಿಳುನಾಡಿನಲ್ಲಿ ಕೆಲವು ಹೆಂಗಸರು ‘ನಿಮಗೆ ತಮಿಳುನಾಡಿನ ಕನ್ಯೆ ಆದ್ರೆ ಸರೀನಾ?’ ಅಂತ ಕೇಳಿದ್ರಂತಲ್ಲಾ?!

‘ಅದೇರೀ... ಆವಾಗ ‘ಇನ್ನೂ ನಿರ್ಧರಿಸಿಲ್ಲ’ ಅಂದಿದ್ದ ರಾಹುಲ್, ನಡೆದೂ ನಡೆದೂ ಕಾಲು ಗಟ್ಟಿಯಾಗಿ ಗಟ್ಟಿ ನಿರ್ಧಾರಕ್ಕೆ ಬರೋದು ಸುಲಭವಾಗಿರಬೇಕು. ಅಲ್ಲದೆ ಮದುವೆಗೂ ನಡಿಗೆಗೂ ಎಡೆಬಿಡದ ನಂಟಲ್ಲವೇ? ಮರೆತುಬಿಟ್ರಾ, ತಾಳಿ ಕಟ್ಟೋವಾಗ ಸಪ್ತಪದಿ ತುಳಿದದ್ದು?!’

‘ಆದರೆ ಪಾದಯಾತ್ರೆ ಮಾಡೋರು ಸ್ಟೇಟ್ ಹೈವೆ, ನ್ಯಾಷನಲ್ ಹೈವೇಲಿ ಓಡಾಡೋದು’.

‘ಬಾಳ ಪಥಾನೂ ಒಂದು ‘ವೇ’ನೇ. ಅದಕ್ಕೇ ವಿವಾಹಕ್ಕೆ ಮದುway ಅನ್ನೋದು. ಹೀಗೆ ಯಾತ್ರೆ ಮಾಡಿ ಮಾಡಿ ಗಟ್ಟಿಯಾದರೆ ಗಟ್ಟಿಮೇಳಾನೂ ನೆಮ್ಮದಿಯಿಂದ ಕೇಳಿಸ್ಕೊಬಹುದು’.

‘ಪಾದಯಾತ್ರೆಯಿಂದ ಪಾಣಿಗ್ರಹಣ ಸುಲಭ ವಾಗಿ ಆಗೋದಾದ್ರೆ, ಸೋನಿಯಾಜಿ ಅವರೂ ಸೊಸೆನ ಪಡ್ಕೊಳ್ಳೋ ಸಂಭ್ರಮಕ್ಕೆ ಬೇಗ ಸಜ್ಜಾಗಬಹುದು’.

‘ಹಾಗೇ... ಸೊಸೆ, ಮೊಮ್ಳಕ್ಕಳಿಗೆ ಕಾಯ್ತಾಯಿರೊ ಲಕ್ಷಾಂತರ ತಾಯಂದಿರೂ ಪಾದಯಾತ್ರೆಗೆ ಜೈ ಅನ್ನಬಹುದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.