ADVERTISEMENT

ಚಿರುಮುರಿ: ಗುಂಡಿ- ಚರಂಡಿ!

ಬಿ.ಎನ್.ಮಲ್ಲೇಶ್
Published 6 ಜನವರಿ 2023, 20:00 IST
Last Updated 6 ಜನವರಿ 2023, 20:00 IST
   

ಜನನಾಯಕರ ಜನತಾ ದರ್ಶನದಲ್ಲಿ ಸಮಸ್ಯೆ ಹೇಳಿಕೊಳ್ಳಲು ಜನರ ದಂಡೇ ಸೇರಿತ್ತು. ನಾಯಕರು ಜನರ ಕೈಯಿಂದ ಅರ್ಜಿಗಳನ್ನು ಕಿತ್ತುಕೊಳ್ಳುತ್ತ ತಮ್ಮ ಪಿ.ಎ. ಕೈಗೆ ತುರುಕುತ್ತಿದ್ದರು.

ಒಬ್ಬ ಮಹಿಳೆ ‘ಸ್ವಾಮಿ ನಂಗೆ ಮನೆ ಇಲ್ಲ, ಗುಡಿಕಟ್ಟೆ ಮೇಲೆ ಮಲಗ್ತಾ ಇದೀನಿ’ ಎಂದಳು.

‘ಅಯ್ಯೋ ಇರಮ್ಮ, ಗ್ರಾಮವಾಸ್ತವ್ಯದಲ್ಲಿ ನಾನೂ ಸ್ಕೂಲು, ಅವರಿವರ ಮನೇಲಿ ಮಲಗ್ತಾ ಇಲ್ವಾ?’ ರೇಗಿದರು ನಾಯಕರು.

ADVERTISEMENT

‘ಸ್ವಾಮಿ, ನಂಗೆ ವೃದ್ಧಾಪ್ಯ ವೇತನ ಕೊಡ್ಸಿ’ ವಯೋವೃದ್ಧರೊಬ್ಬರು ಕೇಳಿದರು.

‘ವೇತನ ಬಿಡ್ರೀ, ಅಲ್ಲಿ ದೇಶದ ಗಡಿ ನೋಡ್ರೀ, ಉಗ್ರರನ್ನ ನೋಡ್ರೀ...’ ಪಟ್ ಅಂತ ಬಂತು ಉತ್ತರ.

‘ಸಾಹೇಬ್ರೆ... ನಮ್ಮ ಬೆಳೆಗೆ ಬೆಂಬಲ ಬೆಲೆ ಬೇಕು’.

‘ಬೆಂಬಲ ಬೆಲೆ ಕೇಳ್ತೀರಿ, ಟ್ಯಾಕ್ಸ್ ಕಟ್ಟಿದೀರೇನ್ರಿ? ಜಿಡಿಪಿ ಏನಾಗಿದೆ ಗೊತ್ತಿದೆಯೇನ್ರಿ?’

‘ಸಾರ್‌, ನಮ್ ಪಂಪ್‌ಸೆಟ್‌ಗಳಿಗೆ ಕರೆಂಟಿಲ್ಲ’.

‘ಕರೆಂಟ್ ಹಂಗಿರ್‍ಲಿ, ಮೊದ್ಲು ಕೊರೊನಾ ಓಡಿಸ್ರಿ, ಮಾಸ್ಕ್ ಹಾಕ್ಕಳಿ’.

‘ಊರು... ರಸ್ತೆ, ಗುಂಡಿ, ಚರಂಡಿ...’

‘ರೀ... ರಸ್ತೆ, ಗುಂಡಿ, ಚರಂಡಿ ಅಂತ ಜುಜುಬಿ ವಿಷಯ ನನ್ನತ್ರ ತರಬೇಡಿ, ನಿಮ್ ಮಕ್ಕಳು ಲವ್ ಮಾಡದಂಗೆ ನೋಡ್ಕಳಿ, ಹುಷಾರಾಗಿರಿ’.

‘ಅಲ್ಲ ಸಾರ್, ಗುಂಡೀಲಿ, ಚರಂಡೀಲಿ...’

‘ಒಂದ್ಸಲ ಹೇಳಿದ್ರೆ ಅರ್ಥ ಆಗಲ್ವಾ? ಗುಂಡಿ ಚರಂಡಿ ಬಿಟ್ಟು ಬೇರೆ ಮಾತಾಡಿ’. ನಾಯಕರಿಗೆ ಸಿಟ್ಟು ಬಂತು. ‘ಥೋ... ಹಂಗಲ್ಲ ಸಾರ್’.

‘ಹಂಗೂ ಇಲ್ಲ, ಹಿಂಗೂ ಇಲ್ಲ, ಮೊದ್ಲು ನಿಮ್ ಮಕ್ಕಳನ್ನ ಕಾಪಾಡ್ಕಳಿ. ಇಲ್ಲಾಂದ್ರೆ ನಮಗೆ ವೋಟ್ ಹಾಕಿ, ನಾವೇ ನೋಡ್ಕೊತೀವಿ’.

‘ಸಾರ್ ಒಂದ್ನಿಮಿಷ, ಅಲ್ಲಿ ಆ್ಯಕ್ಸಿಡೆಂಟ್ ಆಗಿದೆ, ನಿಮ್ ಮಗನ ಬೈಕು ಗುಂಡಿ ಎಗರಿ ಚರಂಡಿಗೆ ಬಿದ್ದಿದೆಯಂತೆ’.

ಜನನಾಯಕರು ಎಲ್ಲ ಅಲ್ಲೇ ಬಿಟ್ಟು ಗುಂಡಿ, ಚರಂಡಿ ಕಡೆಗೆ ಓಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.