ADVERTISEMENT

ಚುರುಮುರಿ: ಹೆಣ್ಮಕ್ಳೆ ಸ್ಟ್ರಾಂಗು ಗುರು...

ಕೆ.ವಿ.ರಾಜಲಕ್ಷ್ಮಿ
Published 1 ಫೆಬ್ರುವರಿ 2023, 19:30 IST
Last Updated 1 ಫೆಬ್ರುವರಿ 2023, 19:30 IST
   

ಟಿ.ವಿ.ಯಲ್ಲಿ ಬಜೆಟ್ ಪ್ರಸ್ತುತಿ ಬಿತ್ತರವಾಗುತ್ತಿದ್ದಂತೆ ‘ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮಿತಿಯನ್ನು ಹೆಚ್ಚಿಸಿದ್ದಾರೆ’ ಎಂಬ ನನ್ನವಳ ರನ್ನಿಂಗ್ ಕಾಮೆಂಟರಿ ಶುರುವಾಗಿತ್ತು.

‘ನಿಜ, ನಾನೂ ಈಗ ಹಿರಿಯ ನಾಗರಿಕನೆ’ ಬೀಗಿದೆ.

‘ಅಜ್ಜಿ ನಿನಗಿಂತ ಸೀನಿಯರ್ ಅನ್ನೋದು ಮರೀಬೇಡ’ ಪುಟ್ಟಿಯ ಅಡ್ಡಮಾತು.

ADVERTISEMENT

‘ಹೊಸ ಪ್ರಸ್ತಾವ, ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್‌ನಲ್ಲಿ ಎರಡು ಲಕ್ಷ ಇಡಬಹುದು...’ ನನ್ನತ್ತ ಅರ್ಥಗರ್ಭಿತ ನೋಟ.

‘ಅದೇನೋ ಶ್ರೀ ಅನ್ನ, ನಮ್ಮ ದೇಶದಲ್ಲಿ ಹೆಚ್ಚು ಬೆಳಿತೀವಿ ಅಂದ್ರು ಗೊತ್ತಾಗ್ಲಿಲ್ಲ’ ಅತ್ತೆ ಹುಬ್ಬೇರಿಸಿದರು.

‘ಅದು ಸಿರಿಧಾನ್ಯ, ಮಿಲ್ಲೆಟ್ಸ್ ಅಂತ ಮಾಲ್‌ಗಳಲ್ಲಿ ಮಾರ್ತಾರಲ್ಲ? ಮೊನ್ನೆ ನನ್ ಫ್ರೆಂಡ್ಸ್ ಬಂದಾಗ ಸಜ್ಜೆ ರೊಟ್ಟಿ ಮಾಡಿದ್ಯಲ್ಲ, ತುಂಬಾ ರುಚಿಯಾಗಿತ್ತು ಅಂತ ನಿನ್ನ ಹೊಗಳ್ತಿದ್ರು’ ಪುಟ್ಟಿ ಸಂದೇಹ ನಿವಾರಿಸಿದಳು.

‘ಅಪ್ಪಾ, ಮೊಬೈಲ್ ಇನ್ಮುಂದೆ ಅಗ್ಗ, ಅಜ್ಜಿಗೂ ಸ್ಮಾರ್ಟ್‌ಫೋನ್ ಕೊಳ್ಳೋಣ’ ಎಂದಾಗ ಅತ್ತೆ ಹಿಗ್ಗಿ ಹೀರೇಕಾಯಿ ಆದರು.

‘ಚಿನ್ನ ಬೆಳ್ಳಿ ದುಬಾರಿ ಆಗುತ್ತೆ’ ಹಲ್ಕಿರಿದೆ, ಅವೆಲ್ಲ ಎಟುಕದು, ಅಷ್ಟರಮಟ್ಟಿಗೆ ನನ್ನ ಪರ್ಸ್ ಭದ್ರ ಅಂದುಕೊಂಡೆ.

‘ರಥಸಪ್ತಮಿ ಬರ್ತಿದ್ಹಾಗೆ ಬಿಸಿಲು ಏರ್ತಿದೆ... ಕರೆಂಟೂ ಆಗಾಗ ಹೋಗ್ತಿದೆ’ ಎನ್ನುತ್ತಾ ಕಂಠಿ ಬಂದ. ‘ಮನೆಯ ಮಾಲೀಕತ್ವ... ಮಹಿಳೆಯರೇ ಮುಂದಿದ್ದಾರೆ’ ಎಂದ.

‘ಮನೆಯೊಡೆಯ ಗಂಡಸಾದರೂ ನಿಜವಾದ ಅರ್ಥದಲ್ಲಿ ಮನೆಯಾಕೆಯೇ ನಿಜವಾದ ಒಡತಿ ಅಲ್ವೇ?’ ಎಂದು ನಾನೂ ರಾಗ ಹಾಡಿ ಅವುಡುಗಚ್ಚಿದೆ.

‘ಕ್ರಿಕೆಟ್‌ನಲ್ಲೂ 19 ವರ್ಷದ ಒಳಗಿನವರ ಮಹಿಳಾ ಟೀಮ್ ಐತಿಹಾಸಿಕ ಜಯ ಸಾಧಿಸಿದೆ’ ಪುಟ್ಟಿ ಕುಣಿದಳು.

‘ಅಷ್ಟೆಲ್ಲ ಯಾಕೆ? ಸತತ ಐದನೇ ಬಾರಿ, ನಮ್ಮ ನಿರ್ಮಲಾ ಮೇಡಂರವರಿಂದ
ಬಜೆಟ್ ಮಂಡನೆ ಅಂದರೆ ಸಾಮಾನ್ಯ ವಿಷಯವೇ? ಹೆಣ್ಮಕ್ಕಳೇ ಸ್ಟ್ರಾಂಗ್ ಅನ್ನೋದ್ರಲ್ಲಿ ಎರಡು ಮಾತಿಲ್ಲ’ ನನ್ನವಳು ಮುಕ್ತಾಯ ಹಾಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.