ADVERTISEMENT

ಚುರುಮುರಿ: ಓಲ್ಡ್ ಔಟು, ಗೋಲ್ಡ್ ಹೈಟು!

ತುರುವೇಕೆರೆ ಪ್ರಸಾದ್
Published 3 ಫೆಬ್ರುವರಿ 2023, 19:31 IST
Last Updated 3 ಫೆಬ್ರುವರಿ 2023, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪರ್ಮೇಶಿ ಪೇಪರ್ ಹಿಡ್ಕೊಂಡು ಕೂತಿದ್ದ. ಪದ್ದಮ್ಮ ಬಂದ್ರು: ‘ಏನ್ರೀ ನಿಮಗೇನನಿಸುತ್ತೆ ಬಜೆಟ್ಟು?’

‘ನನಗೆ ಏನು ಅನಿಸಿ ಏನು ಪ್ರಯೋಜನ? ನನ್ನ ಮೂತಿಗೆ ಮೈಕ್ ಹಿಡಿದು ಕೇಳೋರು ಯಾರು? ಎಲ್ಲಾ ಮೊಸರನ್ನ ಮೆತ್ತೋರೇ! ಕೆಲವರು ಬಜೆಟ್‍ನ ಅಬ್ಬಬ್ಬಾ ಅಂತಾರೆ. ಕೆಲವು ಜುಬ್ಬಾಗಳು ಡಬ್ಬಾ ಅಂತಾರೆ. ಇದೆಲ್ಲಾ ಇದ್ದಿದ್ದೇ!’ ಅಂದ ಪರ್ಮೇಶಿ.

‘ನನಗೂ ಯಾಕೋ ಈ ಬಜೆಟ್ ಸಪ್ಪೆ ಅಂತಲೇ ಅನಿಸ್ತಿದೆ ಕಣ್ರೀ’.

ADVERTISEMENT

‘ಯಾಕೇ... ನಿಮಗೆ ಮಹಿಳಾ ಸಮ್ಮಾನ್ ಠೇವಣಿ ಬರ್ತಿದೆಯಲ್ಲ. 2 ಲಕ್ಷ ರೂಪಾಯಿ ಇಟ್ರೆ 7.5 ಪರ್ಸೆಂಟ್ ಬಡ್ಡಿ ಕಣೆ’.

‘ಅಯ್ಯೋ! ಠೇವಣಿ ಇಡಕ್ಕೆ 2 ಲಕ್ಷ ಎಲ್ಲಿಂದ ತರೋದು?’

‘ಇಲ್ಲಿ ನಮ್ ರಾಜಕೀಯ ಪಕ್ಷದೋರು ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡ್ತಾರಲ್ಲ, ಅದನ್ನೇ ಠೇವಣಿ ಇಟ್ರಾಯ್ತು’.

‘ಒಟ್ನಲ್ಲಿ ಹೆಂಗಸರು ಠೇವಣಿ ಇಟ್ರೇನೆ ಗಂಡಸರ ಠೇವಣಿ ಉಳಿಯೋದು ಅನ್ನೋ ಹಾಗಾಗಿದೆ. ಹಣಕಾಸು ಸಚಿವರೂ ಒಬ್ರು ಹೆಂಗ್ಸಾಗಿ ಹೆಂಗಸರ ಸೆಂಟಿಮೆಂಟೇ ಅರ್ಥ ಆಗಿಲ್ಲವಲ್ರೀ? ಚಿಮಣಿ, ಕರಿಮಣಿ ಎರಡೂ ಹೆಂಗಸರ ಭಾವನಾತ್ಮಕ ವಿಷಯಗಳು. ಅವೆರಡರ ರೇಟೂ ಜಾಸ್ತಿ ಮಾಡೋದು ಸರಿನೇನ್ರೀ?’

‘ಅಯ್ಯೋ ನನ್ ಕಷ್ಟ ನನಗೆ, ಅರ್ಥ ಸಚಿವರು ಬೇಡ ಗುಜರಿ ವಾಹನ, ಗುಜರಿ ರಾಜಕೀಯ ಅಂತ ಹೇಳಿದಾರೆ. ನನ್ ವೆಹಿಕಲ್ ಕತೆ ಏನು ಅಂತ ಯೋಚ್ನೆ ಆಗಿದೆ...’

‘ಆ ಪುಲ್ಲಿಂಗ್ ಇಲ್ಲದ ಡಬ್ಬ ಗಾಡಿನ ಗುಜರಿಗೆ ಎಸೀರಿ. ಈಗ ಚುನಾವಣಾ ಟೈಮು... ಸಾಲ ಕೊಡ್ಸಕ್ಕೆ ನಾ ಮುಂದು ತಾ ಮುಂದು ಅಂತ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ. ಸಾಲ ಮಾಡಿ ಒಂದು ಕಾರೇ ತಗೊಳ್ಳಿ. ಹಾಗೇ ನನಗೊಂದಿಷ್ಟು ಚಿನ್ನ ಕೊಡಿಸಿ’.

‘ಚಿನ್ನನಾ? ಅದಕ್ಕೆಲ್ಲಿಂದ ದುಡ್ಡು ತರೋದು?’

‘ಬಜೆಟ್ಟಲ್ಲಿ ಮೋದಿ ಟ್ಯಾಕ್ಸ್ ರಿಯಾಯಿತಿ ಕೊಟ್ಟಿದಾರಲ್ಲ. 7 ಲಕ್ಷದವರೆಗೆ ಟ್ಯಾಕ್ಸೇ ಇಲ್ವಲ್ಲ. ಆ ಉಳಿಯೋ ಟ್ಯಾಕ್ಸಲ್ಲಿ ನನಗೆ ಚಿನ್ನ ಕೊಡ್ಸಿದ್ರಾಯ್ತು’ ನಕ್ಕರು ಪದ್ದಮ್ಮ, ಪರ್ಮೇಶಿ ಆಕಾಶ ನೋಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.