ADVERTISEMENT

ಚುರುಮುರಿ: ವಾಪಸ್ ಭಾಗ್ಯ

ಆನಂದ ಉಳಯ
Published 21 ಸೆಪ್ಟೆಂಬರ್ 2022, 17:39 IST
Last Updated 21 ಸೆಪ್ಟೆಂಬರ್ 2022, 17:39 IST
   

‘ಹೀಗೂ ಉಂಟೆ?’ ಎಂದು ಹೆಂಡತಿ ಉದ್ಗಾರವೆ ತ್ತಿದಾಗ ನಾನು ‘ಹೇಗುಂಟು?’ ಎಂದು ಕೇಳಿದೆ.

‘ಅದೇರಿ, ಸಿನಿಮಾ ಫ್ಲಾಪ್ ಆದರೆ ಹೀರೊ ದುಡ್ಡು ವಾಪಸ್ ಮಾಡೋದು ಅಥವಾ ಸಂಭಾವನೇನೆ ಕೇಳದೇ ಇರೋದು’.

‘ಹೌದೆ? ಯಾರು ಅದು ಈ ನ್ಯೂ ಹೀರೊ?’

ADVERTISEMENT

‘ಅಮೀರ್ ಖಾನ್. ಅವರ ಇತ್ತೀಚಿನ ಚಿತ್ರ ಗಲ್ಲಾಪೆಟ್ಟಿಗೇಲಿ ಸೋತಿದ್ದಕ್ಕೆ ಖಾನ್ ಸಾಹೇಬ್ರು ಸಂಭಾವನೆ ಒಲ್ಲೆ ಎಂದಿದ್ದಾರೆ’.

‘ಅವರ ಹೆಸರೇ ಅಮೀರ್. ಪ್ರೊಡ್ಯೂಸರ್ ಗರೀಬ್ ಆಗದೇ ಇರಲಿ ಅಂತ ಸಂಭಾವನೆ ರೈಟ್ ಆಫ್ ಮಾಡಿದ್ದಾರೆ’ ಎಂದು ವಿವರಿಸಿದೆ.

‘ಎಷ್ಟು ಜನಕ್ಕೆ ಈ ಉದಾರ ಬುದ್ಧಿ ಇರುತ್ತೆ? ಚಿತ್ರ ಗೆಲ್ಲಲಿ ಬಿಡಲಿ ನಮಗೆ ಕೊಡೋದು ಕೊಟ್ಬಿಡಿ ಅಂತ ಹೇಳೋರೇ ಜಾಸ್ತಿ ಅಲ್ಲವೆ?’

‘ಇದೇ ಟ್ರೆಂಡ್ ಎಲ್ಲ ಕಡೆ ವ್ಯಾಪಿಸಿದರೆ ಚೆನ್ನಾಗಿರುತ್ತೆ ನೋಡು’.

‘ಆಂದರೆ?’

‘ಆಪರೇಷನ್ ಸಕ್ಸಸ್ ಆಗದಿದ್ರೆ ಆಸ್ಪತ್ರೆ ಬಿಲ್ ರೈಟ್ ಆಫ್. ವಿದ್ಯಾರ್ಥಿ ಫೇಲ್ ಆದರೆ ಕಟ್ಟಿದ್ದ ಫೀಸ್ ವಾಪಸ್...’

‘ಹೋಟೆಲಿನಲ್ಲಿ ಮಸಾಲೆ ದೋಸೆ ಚೆನ್ನಾಗಿಲ್ಲ ಅಂದರೆ ಬಿಲ್ ಮಾಫಿ. ಸಿನಿಮಾ ಚೆನ್ನಾಗಿಲ್ಲ ಅಂದರೆ ಟಿಕೆಟ್ ದುಡ್ಡು ವಾಪಸ್ ಮಾಡಬಹುದೆ?’

‘ಮೊನ್ನೆ ಕ್ರಿಕೆಟ್ ಮ್ಯಾಚ್ ರದ್ದಾದಾಗ ಟಿಕೆಟ್ ಹಣ ಪಾಪಸ್ ಮಾಡಿದ್ದು ನೆನಪಿದೆಯೆ?’

‘ಮ್ಯಾಚ್ ಚೆನ್ನಾಗಿರಲಿಲ್ಲ ಅಂದರೂ ದುಡ್ಡು ವಾಪಸ್ ಮಾಡಬೇಕು ಅನ್ನೋ ಪರಿಸ್ಥಿತಿ ಬರಬೇಕು ನೋಡು’ ಎಂದೆ.

‘ಅದಿರಲೀರಿ. ಜ್ಯೋತಿಷಿ ಒಬ್ಬರು ಪರಿಹಾರ ಸಿಗದಿದ್ದರೆ ಗಿರಾಕಿಗೆ ಹಣ ಪಾಪಸ್ ಅಂತ ಜಾಹೀರಾತು ಹಾಕ್ತಾ ಇದಾರೆ ಟೀವೀಲಿ’.

‘ಹೌದೆ? ಅಂದರೆ ಆ ಜ್ಯೋತಿಷೀಗೇ ಗೊತ್ತಿಲ್ಲ ತನ್ನ ಸಾಮರ್ಥ್ಯ ಎಷ್ಟು ಅಂತ...’

‘ನಾಳೆ ಶಾಸಕರೊಬ್ಬರು ನಾನು ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ. ಚುನಾವಣೆ ಸಮಯದಲ್ಲಿ ನನಗೆ ವೋಟು ಹಾಕಿ ಅಂತ ನಿಮಗೆಲ್ಲ ಎರಡೆರಡು ಸಾವಿರ ಕೊಟ್ಟಿದ್ದೆನಲ್ಲಾ ಅದೆಲ್ಲಾ ವಾಪಸ್ ಮಾಡಿ ಎಂದು ಕೇಳಿದರೆ?’

‘ಆ ಪರಿಸ್ಥಿತಿ ಖಂಡಿತ ಬರೊಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.