ADVERTISEMENT

ಚುರುಮುರಿ: ಗ್ರಾಚಾರ ನೆಟ್ಟಗಿಲ್ಲ

ಸುಧೀಂದ್ರ
Published 12 ಮಾರ್ಚ್ 2021, 19:31 IST
Last Updated 12 ಮಾರ್ಚ್ 2021, 19:31 IST
   

ಪಾಸ್‍ಪೋರ್ಟ್ ಆಫೀಸಿನಂತಿದ್ದ ಟೀವಿ ತ್ರಿಕಾಲ ಜ್ಞಾನಿಗಳ ಹೈಟೆಕ್ ಕಚೇರಿಗೆ ಬಂದೆ. ಎಂಟು ಬಗೆಯ ಫಾರ್ಮ್‌ಗಳನ್ನು ಭರ್ತಿ ಮಾಡಿ, ಕೇಳಿದೆಡೆ ಫೀಸುಗಳನ್ನು ಕಟ್ಟಿದೆ. ಗುರೂಜಿಯ ಭೇಟಿಗೆಂದು ಕಾದಿದ್ದ ನೂರಾರು ಜನರೊಂದಿಗೆ ನಾನೂ ಲೌಂಜಿನಲ್ಲಿ ಕುಳಿತೆ. ಅಲ್ಲೇ ಇದ್ದ ಟೀವಿಯಲ್ಲಿ ಸಿ.ಡಿ ಹಗರಣದಿಂದಾಗಿ ರಾಜೀನಾಮೆ ಕೊಟ್ಟವರ ಸ್ಥಾನಕ್ಕೆ ಯಾರು ಬರಬಹುದೆಂಬುದರ ಬಗ್ಗೆ ಚರ್ಚೆ ನಡೀತಿತ್ತು. ಭೇಟಿಗೆ ಕರೆ ಬಂದಾಗ ಎರಡು ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ.

ತಂದಿದ್ದ ಜಾತಕವನ್ನು ಗುರುಗಳ ಮುಂದಿಟ್ಟು ಕೈಮುಗಿದೆ. ಮೇಲಿಂದ ಕೆಳಗೆ ನನ್ನ ನೋಡಿ– ‘ನಿಮ್ಮ ಸಾಹಿತ್ಯ ಪರಿಷತ್ ಎಲೆಕ್ಷನ್ನಿಗೆ ಇನ್ನೂ ಟೈಮಿದೆಯಲ್ವಾ?’ ಎಂದರು. ‘ಇದು ನನ್ನ ಜಾತಕವಲ್ಲ’ ಅನ್ನುವಷ್ಟರಲ್ಲಿ ತಮ್ಮ ಎಡಗೈ ಮೇಲೆತ್ತಿ ಸುಮ್ಮನಿರುವಂತೆ ಸೂಚಿಸಿದರು. ಮುಂದಿದ್ದ ಲ್ಯಾಪ್‍ಟಾಪಲ್ಲಿ ಮಂಡಲ ಬಿಡಿಸಿ, ನೆಲಕ್ಕೆ ಕವಡೆಗಳನ್ನೆಸೆದು, ಬೆರಳ ತುದಿಗಳಲ್ಲಿ ಎಣಿಕೆ ಮಾಡುತ್ತಾ ಕಣ್ಮುಚ್ಚಿಕೊಂಡರು. ನನ್ನ ಎದೆಬಡಿತ ನನ್ನ ಕಿವಿಗೇ ಅಪ್ಪಳಿಸುತ್ತಿತ್ತು.

‘ಗುರುಬಲ ಇಲ್ಲ’ ಎಂದು ಜಾತಕ ಮುಂದೆಸೆದರು. ಎರಡು ತಿಂಗಳ ಹಿಂದೆ ಟೀವಿ ಷೋನಲ್ಲಿ ಇದೇ ಗುರೂಜಿ, ನಮ್ಮ ಎಂಎಲ್ಲೆ ಸಾಹೇಬರ ಜಾತಕ ನೋಡಿ, ಅವರಿಗೆ ‘ರಾಜಯೋಗ’ ಕಾದಿದೆಯೆಂದಿದ್ದರು. ಅದನ್ನ ನಂಬ್ಕೊಂಡು, ರಾಜೀನಾಮೆಯಿಂದ ಖಾಲಿಯಾಗಿರೋ ಮಿನಿಸ್ಟ್ರ ಚೇರಿಗೆ ಅವರೇ ಬರ್ತಾರೆ ಅಂತ ಮೊನ್ನೆ ಬೆಟ್ಟಿಂಗ್ ಕಟ್ಟಿದ್ದೆ. ಈಗ ನೋಡಿದ್ರೆ ಅವರ ಜಾತಕಕ್ಕೆ ಗುರುಬಲ ಇಲ್ಲವಂತೆ.

ADVERTISEMENT

ಸೋತ ಮುಖ ಹೊತ್ಕೊಂಡು ಮನೆ ಸೇರಿದವನನ್ನು ‘ಏನಾಯ್ತು?’ ಎಂದು ಮಡದಿ ವಿಚಾರಿಸಿದಳು. ‘ನಮ್ಮ ಎಂಎಲ್ಲೆ ಗ್ರಾಚಾರ ನೆಟ್ಟಗಿಲ್ವಂತೆ’ ಅಂದೆ. ‘ಷೇರು ಮಾರ್ಕೆಟ್ಟಲ್ಲಿ ಕಳ್ಕೊಂಡಿದ್ದು ಸಾಲ್ದೂಂತ ಕ್ರಿಕೆಟ್ ಮ್ಯಾಚ್ ಬೆಟ್ಟಿಂಗಲ್ಲಿ ದುಡ್ಡು ಹಾಕಿ ಸೋತ್ರಿ. ಈಗ ಯಾರು ಮಿನಿಸ್ಟ್ರಾಗ್ತಾರೇಂತ ಬೆಟ್ಟಿಂಗ್ ಕಟ್ತಿದ್ದೀರಿ. ನಿಮ್ಮನ್ನು ಕಟ್ಕೊಂಡ ನನ್ನ ಗ್ರಾಚಾರ ಮೊದಲು ಸರಿ ಇಲ್ಲ’ ಎನ್ನುತ್ತಾ ಮೂತಿ ತಿವಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.