ADVERTISEMENT

ಬಂಗಲೆಯ ಅದೃಷ್ಟ!

ಚಂದ್ರಕಾಂತ ವಡ್ಡು
Published 18 ಅಕ್ಟೋಬರ್ 2021, 17:43 IST
Last Updated 18 ಅಕ್ಟೋಬರ್ 2021, 17:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಕಿಂಗ್ ನೆಪದಲ್ಲಿ ಪಾರ್ಕಿಗೆ ಬರುವ ಗೆಳೆಯರಿಗೆ ಇತ್ತೀಚೆಗೆ ಟಾಪಿಕ್‌ಗಳ ಬರ ಕಾಡತೊಡಗಿತ್ತು. ದಿನಂಪ್ರತಿ ಅದದೇ ವಿಷಯಗಳನ್ನು ಮಾತಾಡಿ ನಾಲಗೆ ರುಚಿ ಕಳೆದುಕೊಂಡಿತ್ತು.

ಇಂತಹ ಸಂದರ್ಭದಲ್ಲಿ ಹೊಸ ವಿದ್ಯಮಾನಗಳನ್ನು ತೇಲಿಬಿಟ್ಟು ಸಂಭಾಷಣೆಗೆ ಹೊಸ ತಿರುವು ನೀಡುವುದರಲ್ಲಿ ನಿಪುಣನಾದ ಕೊಟ್ರೇಶಿ ‘ನಮ್ಮ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?’ ಎಂದ. ಗುಂಪಿನಲ್ಲಿದ್ದ ಎಲ್ಲರೂ ತಮ್ಮ ನಿಲುವಿನ ಪಕ್ಷ, ತಮ್ಮ ಒಲವಿನ ನಾಯಕನ ಹೆಸರು ಕೂಗ ತೊಡಗಿದರು. ಒಮ್ಮತ ಮೂಡೀತಾದರೂ ಹೇಗೆ...?!

ತಿಂಗಳೇಶ ಗೊಂದಲಕ್ಕೆ ತೆರೆಯೆಳೆಯಲು ಯತ್ನಿಸಿದ. ‘ಮುಖ್ಯಮಂತ್ರಿ ಆಯ್ಕೆ ಮತದಾರರ ಕೈಯಲ್ಲಿರುತ್ತದೆ. ನಮಗೇಕೆ ತಲೆಬಿಸಿ?’

ADVERTISEMENT

‘ಮುಖ್ಯಮಂತ್ರಿ ಆಯ್ಕೆ ಮಾಡೋರು ಮತದಾರರಲ್ಲ, ಶಾಸಕರು’ ತಿಮ್ಮಣ್ಣ ತನ್ನ ಸಂವಿಧಾನ ಜ್ಞಾನ ಪ್ರಕಟಿಸಿದ. ‘ಇಬ್ಬರೂ ಅಲ್ಲ, ಹೈಕಮಾಂಡ್’ ಎಂದು ಸಂವಿಧಾನಕ್ಕೆ ಮೌಖಿಕ ತಿದ್ದುಪಡಿ ಸೂಚಿಸಿದ ಶೇಖರಗೌಡ.

‘ನಿಜವಾಗಿ ಮುಖ್ಯಮಂತ್ರಿಯನ್ನು ಆರಿಸೋರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಕಾರ್ಪೊರೇಟ್ ಕಂಪನಿ ಮಾಲೀಕರು’ ಮತ್ತೊಂದು ಸತ್ಯ ಬಿಚ್ಚಿಟ್ಟ ತಿಪ್ಪೇಶಿ.

‘ಅದೇನೇ ಇರಲಿ, ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಮಾಡೋದು ಶಾಸಕ ಜಮೀರ್ ಅಹ್ಮದ್ ಖಾನ್ ಕೈಯಲ್ಲಿದೆ…’ ದುರ್ಗಪ್ಪನ ಈ ಮಾತು ಚರ್ಚೆಯನ್ನು ಕುತೂ ಹಲದ ಘಟ್ಟ ಮುಟ್ಟಿಸಿತು. ‘ಸದಾಶಿವನಗರದ
ಲ್ಲಿರುವ ಜಮೀರ್ ಸಾಬರ ಅದೃಷ್ಟದ ಅತಿಥಿಗೃಹ ದಲ್ಲಿರುವವರೇ ಮುಂದಿನ ಮುಖ್ಯಮಂತ್ರಿ. ಈಗ ಆ ಕಟ್ಟಡವನ್ನು ಸಿದ್ದರಾಮಣ್ಣನಿಗೆ ಅರ್ಪಿಸಲು ಮಾಲೀಕರು ನಿರ್ಧರಿಸಿದ್ದಾರೆ’.

‘ಆದರೆ ಸಿದ್ರಾಮಣ್ಣ ಇಂಥ ಮೂಢನಂಬಿಕೆ ನಂಬೋರಲ್ಲ ಬಿಡು…’ ತಿಂಗಳೇಶನ ಅನುಮಾನ.

‘ಹೌದು, ಸಿದ್ರಾಮಣ್ಣಗೆ ಕುಟುಂಬ ರಾಜ ಕಾರಣ, ಜಾತೀಯತೆ, ಮೌಢ್ಯಾಚರಣೆ
ಗಳಲ್ಲಿ ಬಿಲ್ಕುಲ್ ನಂಬಿಕೆಯಿಲ್ಲ. ಆದರೆ ಇಂಥ ವಿಷಯಗಳಲ್ಲಿ ಅವರ ಅಭಿಮಾನಿಗಳ ನಿರ್ಧಾರವೇ ಅಂತಿಮ’ ದಿನೇಶನ ಸಮಜಾ ಯಿಷಿ. ಅಷ್ಟೊತ್ತಿಗೆ ಅಬ್ಬರಿಸಿದ ಮಳೆಯಿಂದ ಗೆಳೆಯರೆಲ್ಲಾ ಚೆಲ್ಲಾಪಿಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.