ಬಿ.ಎನ್.ಮಲ್ಲೇಶ್
ಹರಟೆಕಟ್ಟೆಯಲ್ಲಿ ಚಂದ್ರಯಾನದ ಬಗ್ಗೆ ಚರ್ಚೆ ನಡೆದಿತ್ತು. ‘ಮಂಜಮ್ಮ, ನೀನ್ಯಾಕೆ ಚಂದ್ರನ ಮ್ಯಾಲೆ ಒಂದು ಹೋಟ್ಲು ಮಾಡ್ಬಾರ್ದು?’ ತೆಪರೇಸಿ ಚಾ ಕುಡಿಯುತ್ತ ಕೇಳಿದ.
‘ಮಾಡಬೋದು... ಆದ್ರೆ ಅಲ್ಲೂ ನಿಮ್ಮಂಥ ಉದ್ರಿ ಗಿರಾಕಿಗಳೇ ಸಿಕ್ರೆ ನನ್ ಕತೆ ಅಷ್ಟೆ’ ಮಂಜಮ್ಮ ನಕ್ಕಳು.
‘ನಿನ್ ಉದ್ರಿ ಇವತ್ತಿಲ್ಲ ನಾಳೆ ತೀರಿಸ್ತೀವಿ ಬಿಡು ಮಂಜಮ್ಮ, ನಿಂಗೆ ಚಂದ್ರನ ಮೇಲೆ 60x40 ಸೈಟು ಸಾಕಾ? ಎಲ್ರಿಗಿಂತ ಮೊದ್ಲು ಅಲ್ಲಿ ಜಮೀನು ಖರೀದಿ ಮಾಡಿದ್ರೆ ಸೋವಿ ಸಿಗುತ್ತಂತೆ. ಲೇ ಗುಡ್ಡೆ, ನಿಂಗೆ ಸೈಟ್ ಬ್ಯಾಡೇನೋ?’ ತೆಪರೇಸಿ ಪ್ರಶ್ನೆಗೆ ಗುಡ್ಡೆ ಮಾತಾಡಲಿಲ್ಲ.
‘ಯಾಕೋ ಮಾತಾಡ್ತಿಲ್ಲ? ಮೌನವ್ರತ ಮಾಡ್ತಿದೀಯ?’ ಮಂಜಮ್ಮ ಕೇಳಿದಳು.
‘ಟಮೋಟೊ ರೇಟು ಬಿದ್ದೋಯ್ತು ಅಂತ ಬೇಜಾರೇನೋ?’
‘ಅಥ್ವ ನಿನ್ನೆಂಡ್ತಿ ರಾತ್ರಿ ಮೂಲೆಗಾಕ್ಕಂಡು ಒದ್ಲೇನೋ?’ ದುಬ್ಬೀರ ನಕ್ಕ.
‘ಮೊದ್ಲೆಲ್ಲ ಮಣಿಪುರದ ರಾಜ ಬಬ್ರುವಾಹನನ ತರ ಎಗರಾಡ್ತಿದ್ದೆ. ಈಗ್ಯಾಕೆ ಎಲೆಕ್ಷನ್‌ನಲ್ಲಿ ಡಿಪಾಜಿಟ್ ಕಳ್ಕಂಡಿರೋನ್ ತರ ಕುಂತಿದೀಯ?’
ಯಾರ ಪ್ರಶ್ನೆಗೂ ಗುಡ್ಡೆ ಪಿಟಿಕ್ಕನ್ನಲಿಲ್ಲ.
‘ಅಷ್ಟರಲ್ಲಿ ಅಲ್ಲಿಗೆ ಬಂದ ಗೌಸು ‘ಗುಡ್ಡೆ ಯಾಕ್ ಮಾತಾಡ್ತಿಲ್ಲ ಮುಜೆ ಮಾಲೂಮ್’ ಅಂದ.
‘ಹೌದಾ? ಯಾಕೆ?’ ಮಂಜಮ್ಮ ಕೇಳಿದಳು.
‘ಗುಡ್ಡೆ ಘರ್ ಕು ಏಕ್ ಲವ್ ಲೆಟರ್ ಬಂದಿತ್ತಂತೆ. ಅದ್ರಲ್ಲಿ ಯಾರೋ ಚೋಕ್ರಿ ‘ಐ ಲವ್ ಯು’ ಕರ್ಕೆ ಬರೆದಿತ್ತಂತೆ. ವೋ ದೇಕ್ಕೆ ಪಮ್ಮಕ್ಕ ತವರ್ ಮನೀಗೆ ಹೋಗೇತೆ’ ಗೌಸು ವರದಿ ಒಪ್ಪಿಸಿದ.
‘ಓ... ಇದಾ ಸಮಾಚಾರ? ಸರ್ಕಾರ ಒಡೆಯೋಕೆ, ಸಂಸಾರ ಮುರಿಯೋಕೆ ಕೆಲವ್ರು ಅಂಥ ಪತ್ರ ಬರೀತಿರ್ತಾರೆ, ಅದಕ್ಕೆಲ್ಲ ತೆಲಿ ಕೆಡಿಸ್ಕಾಬಾರ್ದು ಗುಡ್ಡೆ’ ದುಬ್ಬೀರ ಸಮಾಧಾನ ಮಾಡಿದ.
‘ಈಗ ರಾತ್ರಿ ನಂದೇ ಪಾರ್ಟಿ. ಒಳ್ಳೆ ಫಾರಿನ್‌ದು ಫುಲ್ ಬಾಟ್ಲು ಐತೆ, ಎಲ್ರೂ ಸೇರ್ಕಳಾಣ. ಲೇ ಗುಡ್ಡೆ ನೀ ಬರ್ತೀ ಇಲ್ಲೋ?’ ತೆಪರೇಸಿ ಕೇಳಿದ.
‘ಫಾರಿನ್‌ದಾ? ಎಲ್ಲಿ ಸೇರ್ಕಳಾದು?’ ಗುಡ್ಡೆ ಬಾಯಿಬಿಟ್ಟ.
‘ಆಹಾ... ಆಸೆ ನೋಡು, ಚಂದ್ರನ ಮ್ಯಾಲೆ ಸೇರ್ಕಳಾಣ ಅಂತ... ಬರ್ತೀಯಾ?’ ತೆಪರೇಸಿ ಕೀಟಲೆಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.