ADVERTISEMENT

ಚುರುಮುರಿ | ರಿಷಿ ಮೂಲ!

ಬಿ.ಎನ್.ಮಲ್ಲೇಶ್
Published 27 ಅಕ್ಟೋಬರ್ 2022, 20:45 IST
Last Updated 27 ಅಕ್ಟೋಬರ್ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಹಲೋ... ಗುರೂಜಿ ಅಡ್ ಬಿದ್ದೆ, ನಾನು ತೆಪರೇಸಿ, ನಂದೊಂದು ಸಣ್ಣ ಪ್ರಾಬ್ಲಮ್ಮು, ಬಗೆಹರಿಸ್ತೀರಾ?’

‘ಲೋ ದಡ್ಡ, ಎಂತೆಂಥ ಸಮಸ್ಯೆಗಳನ್ನೇ ನುಂಗಿ ನೀರು ಕುಡಿದಿರೋ ಪ್ರಚಂಡ ನಾನು. ನಿನ್ನ ಪುಟುಗೋಸಿ ಪ್ರಾಬ್ಲಂ ಬಗೆಹರಿಸಲ್ವಾ?’

‘ಎಂಥ ಮಾತು ಗುರೂಜಿ, ನಿಮ್ ತಾಕತ್ತು ಏನು ಅಂತ ನಂಗೊತ್ತಿಲ್ವಾ?’

ADVERTISEMENT

‘ನಾನು ತ್ರಿಕಾಲ ಜ್ಞಾನಿ ಕಣೋ ದಡ್ಡ ಮುಂಡೇದೆ, ಮೂರು ಕಾಲಗಳಲ್ಲೂ ಎಲ್ಲಿ ಏನು ನಡೀತಾ ಇದೆ ಅಂತ ಇಲ್ಲೇ ಕೂತಲ್ಲೇ ಹೇಳಬಲ್ಲೆ’.

‘ಹೌದಾ ಗುರೂಜಿ, ನಿಮ್ಗೆ ರಿಷಿ ಸಾಹೇಬ್ರು ಇಂಗ್ಲೆಂಡ್ ಪ್ರಧಾನಿ ಆಗ್ತಾರೆ ಅಂತ ಮೊದ್ಲೇ ಗೊತ್ತಿತ್ತಾ?’

‘ಮುಂಡಾಮೋಚ್ತು... ಗೊತ್ತಿತ್ತಾ ಅಂತ ಕೇಳ್ತೀಯಲ್ಲೋ ಮೂರ್ಖ, ಅವರನ್ನ ಪ್ರಧಾನಿ ಪಟ್ಟಕ್ಕೆ ಕೂರಿಸಿದ್ದೇ ನಾನು. ಏಳನೇ ಮನೇಲಿದ್ದ ಶನೀನ ಪಕ್ಕಕ್ಕೆ ಸರಿಸಿ ರಿಷಿಗೆ ಮೊದಲನೇ ಮನೆಗೆ ದಾರಿ ಮಾಡಿದ್ದೇ ನಾನು’.

‘ತಪ್ಪಾತು ಗುರೂಜಿ, ಸಿಟ್ ಮಾಡ್ಕಾಬೇಡಿ’.

‘ಆಯ್ತು, ಹಾಳಾಗಿ ಹೋಗು. ಈ ಜಗತ್ತಿ ಗೋಸ್ಕರ ನಾನು ಏನೇನೆಲ್ಲ ಮಾಡಿದೀನಿ. ಪ್ರಳಯ ಆಗೋದು ತಪ್ಪಿಸಿದೀನಿ, ಸೂರ್ಯನನ್ನೇ ತಡೆದು ನಿಲ್ಲಿಸಿದೀನಿ, ಮೂರನೇ ಮಹಾಯುದ್ಧ ತಡೆದಿದೀನಿ, ನಂಗೆ ಅಸಾಧ್ಯ ಅನ್ನೋದು, ಗೊತ್ತಿಲ್ಲ ಅನ್ನೋದು ಯಾವುದೂ ಇಲ್ಲ ತಿಳೀತಾ?’

‘ತಿಳೀತು ಗುರೂಜಿ, ನಂದೊಂದು ಪ್ರಶ್ನೆ’.

‘ಆಯ್ತು ಅದೇನ್ ಹೇಳು’.

‘ಇಂಗ್ಲೆಂಡ್ ಪ್ರಧಾನಿ ರಿಷಿ ಸಾಹೇಬ್ರು ಭಾರತದ ಅಳಿಯ ಸರಿ, ಆದ್ರೆ ಅವರ ಮೂಲ ಯಾವುದು? ಪಾಕಿಸ್ತಾನದೋರು ರಿಷಿ ನಮ್ಮೋರು ಅಂತಾರೆ. ಕೀನ್ಯಾ, ತಾಂಜಾನಿಯ ದೋರೂ ರಿಷಿ ನಮ್ಮ ದೇಶದೋರು ಅಂತಾರೆ. ನಿಜವಾಗ್ಲೂ ಅವರ ಮೂಲ ಯಾವುದು?’

ಗುರೂಜಿ ತಡವರಿಸಿದರು. ಮರುಕ್ಷಣ ಬುದ್ಧಿ ಉಪಯೋಗಿಸಿ ‘ಮೂಲನಾ? ಲೋ ದಡ್ಡ ಶಿಖಾಮಣಿ, ನದಿ ಮೂಲ, ಋಷಿ ಮೂಲ ಹುಡುಕಬಾರ್ದು ಅಂತ ಕೇಳಿಲ್ವಾ? ಅದೇ ತರ ರಿಷಿ ಮೂಲಾನೂ ಹುಡುಕಬಾರ್ದು, ಇಡು ಫೋನು’ ಎಂದರು. ತೆಪರೇಸಿ ಪಿಟಿಕ್ಕೆನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.