ADVERTISEMENT

ಚುರುಮುರಿ | ತುಪ್ಪ ಮತ್ತು ನೊಣ

ಆನಂದ ಉಳಯ
Published 14 ಜೂನ್ 2022, 20:16 IST
Last Updated 14 ಜೂನ್ 2022, 20:16 IST
   

‘ಆತ್ಮಸಾಕ್ಷಿ ಅಂದರೇನು ಸಾ?’ ಎಂದು ಕೇಳಿದ ಗೆಳೆಯ. ಅವನಿಗೆ ಡೌಟ್ ಬಂದಾಗಲೆಲ್ಲ ನನ್ನ ಬಳಿ ಬರ್ತಾನೆ. ನಂತರ ಅವನ ಡೌಟು ಬಗೆ ಹರಿಯುತ್ತೋ ಅಥವಾ ಹೆಚ್ಚಾಗುತ್ತೋ ಗೊತ್ತಿಲ್ಲ.

‘ಅದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ’ ಎಂದೆ.

‘ಸರಿಯಾಗಿ ಹೇಳಿ ದೇವ್ರೂ...’

ADVERTISEMENT

‘ನೋಡು, ತುಪ್ಪದ ಜಾಡೀಲಿ ನೊಣ ಬಿದ್ದರೆ ನೊಣ ಎಸೀತಿಯ. ನೀರಿನ ಲೋಟದಲ್ಲಿ ನೊಣ ಬಿದ್ದರೆ ನೀರನ್ನು ಎಸೀತಿಯ, ಹಾಗೇ ಇದು. ಆತ್ಮಸಾಕ್ಷಿ ಸಹ ಪರಿಸ್ಥಿತಿ ನೋಡಿಕೊಂಡು ಚಲಾಯಿಸಬೇಕು’.

‘ಅಂದರೆ ನೀವು ಹೇಳೋದು ಮೊನ್ನೆ ನಡೆದ ರಾಜ್ಯಸಭೆ ಚುನಾವಣೇಲಿ ಜೆಡಿಎಸ್‍ನೋರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಿದ್ದರೆ ಅದು ಆತ್ಮಸಾಕ್ಷಿ ಮತ ಆಗ್ತಿತ್ತು...’

‘ಕರೆಕ್ಟ್’.‘ಆದರೆ ಅದು ಯಾರ ಆತ್ಮಸಾಕ್ಷಿ ಸಾರೂ... ಎಂದಾಗ ನನಗೆ ಗೊಂದಲವಾಯಿತು. ಹೌದು ಅದು ಯಾರ ಆತ್ಮಸಾಕ್ಷಿ? ಕಾಂಗ್ರೆಸ್ ಆತ್ಮಸಾಕ್ಷಿಯೋ ಆಥವಾ ಜೆಡಿಎಸ್ ಆತ್ಮಸಾಕ್ಷಿಯೋ?

‘ಅಲ್ಲಾ ದೇವ್ರೂ. ನಾನು ಬೇರೆಯವರ ಮಾತು ಕೇಳಿ ಕೆಲಸ ಮಾಡಿದರೆ ಅದು ನನ್ನ ಆತ್ಮಸಾಕ್ಷಿ ಹೆಂಗಾಗುತ್ತದೆ? ಆಗ ಅವರ ಆತ್ಮಸಾಕ್ಷಿ ಪರ ನಾನು ಮಾಡಿದ ಕೆಲಸವಾಗುತ್ತದೆ ಅಲ್ವೇ?’ ನನ್ನದು ನಿರುತ್ತರ.

‘ಹೇಳಿ ದೇವ್ರೂ... ನನ್ನ ಆತ್ಮಸಾಕ್ಷಿ ನನ್ನ ಪಕ್ಷದ ಪರವಾಗಿರಬೇಕು. ಅಲ್ವೋ? ಅದು ಬಿಟ್ಟು ಇನ್ನೊಬ್ಬರ ಆತ್ಮಸಾಕ್ಷೀನ ಎರವಲು ತಂದುಕೊಳ್ಳೇಕೆ ಆಗುತ್ತೇನು? ಈಗ ಅದೇ ರೀತಿ ಕಾಂಗ್ರೆಸ್‍ನ ಕೆಲವು ಮಂದಿ ತಮ್ಮ ಆತ್ಮಸಾಕ್ಷಿ ಚಲಾಯಿಸಿ ಜೆಡಿಎಸ್‍ಗೆ ಮತ ಚಲಾಯಿಸಿದಾಗ ಆಕ್ಷೇಪ ಮಾಡಿದ್ದಿದ್ದರೆ ಅದಕ್ಕೇನು ಬೆಲೆ ಇರ್ತಿತ್ತು? ಇಂದಿರಾ ಮೇಡಂ ತಮ್ಮ ಕಾಲದಲ್ಲಿ ವಿ.ವಿ.ಗಿರಿ ಅವರನ್ನು ರಾಷ್ಟ್ರಪತಿ ಮಾಡೋದಿಕ್ಕೆ ಈ ಆತ್ಮಸಾಕ್ಷಿ ಮತ ಚಲಾವಣೇಗೆ ತಂದರು. ಅಂದಿನಿಂದ ಪರಿಸ್ಥಿತಿಗೆ ತಕ್ಕಂತೆ ರಾಜಕಾರಣಿಗಳು ಬಳಸ್ತಿದಾರೆ ದೇವ್ರೂ’ ಎಂದ.

‘ಯು ಹ್ಯಾವ್ ಎ ಪಾಯಿಂಟ್’ ಎಂದೆ ಸಣ್ಣ ಧ್ವನಿಯಲ್ಲಿ. ತುಪ್ಪ– ನೊಣ ಕತೆ ನೆನಪಿಸಿಕೊಂಡೆ. ಶಿಷ್ಯ ಗುರುವನ್ನು ಓವರ್‌ಟೇಕ್‌ ಮಾಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.