ADVERTISEMENT

ಚುರುಮುರಿ: ಫೇಸ್‌ಬುಕ್ ಸುದ್ದಿ!

ಬಿ.ಎನ್.ಮಲ್ಲೇಶ್
Published 13 ಫೆಬ್ರುವರಿ 2025, 20:18 IST
Last Updated 13 ಫೆಬ್ರುವರಿ 2025, 20:18 IST
.
.   

‘ರೀ... ಪೇಪರ್ ಓದಿದ್ರಾ?’ ಮಡದಿ ಪ್ರಶ್ನೆ.

‘ಆಗ್ಲೇ ಓದಿದ್ನಲ್ಲ, ಯಾವುದೂ ಸೀರೆ, ಗೋಲ್ಡ್‌ದು ಸೇಲ್ ಇರ್ಲಿಲ್ಲ ಇವತ್ತು’ ಎಂದೆ.

‘ಹೌದೌದು, ಇದ್ರೂ ಏನ್ ಭಾರಿ ಕೊಡಿಸಿಬಿಡ್ತಿದ್ರಿ, ನಾ ಹೇಳಿದ್ದು ಅದಲ್ಲ’.

ADVERTISEMENT

‘ಮತ್ತೇನು? ನಮ್ ಸಿದ್ರಾಮಣ್ಣಂದು ಮಂಡಿ ನೋವಿನ ಕತೆನಾ? ಅಥ್ವಾ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಾಹೇಬ್ರು ಸಿದ್ರಾಮಣ್ಣರ ಕೈ ಹಿಡ್ಕಂಡು ಕಾಲೆಳೆದ ಸುದ್ದಿನಾ?’

‘ನಿಮ್ತಲೆ, ಅದೆಲ್ಲ ಅಲ್ಲ’.

‘ಓ... ಏರೋ ಶೋ ಸುದ್ದಿ ಅನ್ನು. ಚಿನ್ನ ಬೆಳ್ಳಿ ರೇಟು ಏರಿದ್ದಾ ಅಥ್ವಾ ರಾಜಕೀಯ ನಾಯಕರ ಭಿನ್ನಮತ ತಾರಕಕ್ಕೆ ಏರಿದ್ದಾ?’

‘ನೀವು ನನ್ನ ಬಿ.ಪಿ. ಏರಿಸ್ತಿದೀರ, ಅದ್ಯಾವುದೂ ಅಲ್ಲ’.

‘ಮತ್ತೆ? ಬಿಜೆಪಿ, ಕಾಂಗ್ರೆಸ್ ಮುಖಂಡರ ದೆಹಲಿ ದೌಡ್ ಸುದ್ದಿ?’

‘ಅಲ್ಲ, ನೀವೀಗ ಮೊಬೈಲ್‌ನಲ್ಲಿ ಏನ್ ನೋಡ್ತಾ ಇದೀರಿ?’

‘ಫೇಸ್‌ಬುಕ್ಕಲ್ಲಿ ಒಬ್ರು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ರು, ಅವರ ಪ್ರೊಫೈಲ್ ನೋಡ್ತಾ ಇದೀನಿ’.

‘ಫ್ರೆಂಡ್ ರಿಕ್ವೆಸ್ಟ್ ಕಳ್ಸಿರೋದು ಮೇಲಾ ಫೀಮೇಲಾ?’

‘ಫೀಮೇಲು, ಯಾಕೆ?’

‘ಮ್ಯಾರೀಡಾ ಅನ್‌ಮ್ಯಾರೀಡಾ?’

‘ಸಿಂಗಲ್ ಅಂತಿದೆಯಪ್ಪ’.

‘ನಿಮ್ಗೆ ಫೇಸ್‌ಬುಕ್ಕಲ್ಲಿ ಎಷ್ಟು ಹುಡುಗೀರು ಫ್ರೆಂಡ್ಸ್ ಅದಾರೆ?’

‘ಅಲೆ ಇವ್ಳ, ಯಾಕೆ, ಏನಾಯ್ತೀಗ?’

‘ಆಗ್ಲೇ ಪೇಪರ್ ಓದಿದ್ರಾ ಅಂತ ಕೇಳಿದ್ನಲ್ಲ, ಇದ್ಕೇ. ಯಾರೋ ಒಬ್ಬ ಮಹಾನುಭಾವ ಯಾರಿಗೂ ಗೊತ್ತಾಗದಂಗೆ ಇಬ್ರನ್ನ ಮದುವೆ ಆಗಿ ದ್ನಂತೆ. ಆ ಹುಡುಗೀರಿಬ್ರೂ ಫೇಸ್‌ಬುಕ್ ಫ್ರೆಂಡ್ಸ್ ಆಗಿದ್ರಿಂದ ಇಬ್ರಿಗೂ ಒಬ್ಬನೇ ಗಂಡ ಅನ್ನೋದು ಗೊತ್ತಾಗಿ, ಅವನನ್ನ ಒದ್ದು ಒಳಗಾಕ್ಸಿದ್ರಂತೆ’.

‘ಅದ್ಸರಿ, ಅದನ್ನ ನಂಗ್ಯಾಕೆ ಹೇಳ್ತಿದೀಯ?’

‘ಮುಂದೆ ಅಕಸ್ಮಾತ್ ಮಳೆ ಬಂದ್ರೆ ಈಗ್ಲೇ ಪಂಚೆ ಎತ್ತಿ ಕಟ್ಕಂಡಿರ್‍ಲಿ ಅಂತ’.

ಇದ್ನ ಎಲ್ಲೋ ಕೇಳಿದೀನಲ್ಲ ಅನ್ಸಿದ್ರೂ ಕೇಳೋಕೆ ಧೈರ್ಯ ಸಾಲದೆ, ಯಾಕೋ ಟೈಮ್ ಸರಿ ಇಲ್ಲ ಅನ್ಕೊಂಡು ಮೊಬೈಲಿಟ್ಟು ಮೇಲಕ್ಕೆದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.