ADVERTISEMENT

ಚುರುಮುರಿ: ಗಂ ಫ್ರಮ್ ಗೋ!

ಗುರು ಪಿ.ಎಸ್‌
Published 6 ಆಗಸ್ಟ್ 2025, 20:01 IST
Last Updated 6 ಆಗಸ್ಟ್ 2025, 20:01 IST
.
.   

ಹಾಲುಬಿಳುಪಿನ ಉಡುಗೆಯಲ್ಲಿ ಶೋಭಿಸುತ್ತಿದ್ದ ಕಿರೀಟಧಾರಿ ದೇವತೆ ಪ್ರತ್ಯಕ್ಷಳಾದಳು.  

‘ಮಾತೆ, ಯಾರು ತಾವು?’ ಅಚ್ಚರಿ ಮಿಶ್ರಿತ ಭಯದಲ್ಲಿ ಕೇಳಿದ ಲಖನೌದ ಲಕ್ಷ್ಮಣ. 

‘ನಾನು ಗಂ ಫ್ರಮ್ ಗೋ’.

ADVERTISEMENT

‘ಅಂದ್ರೆ ದೇವಿ?’ 

‘ಅಂದ್ರೆ, ಗಂಗಾ ಫ್ರಮ್ ಗೋಮುಖ ಅಂತ’. 

‘ನಾವೇನು ತಪ್ಪು ಮಾಡಿದ್ದೆವು ತಾಯಿ, ನೀರಿನ ರೂಪದಲ್ಲಿ ಬಂದು ನಮ್ಮ ಮನೆ–ಮಠ–ಮಂದಿರವನ್ನೆಲ್ಲ ಕೊಚ್ಚಿಕೊಂಡು ಹೋಗುವಂತೆ ಮಾಡಿರುವೆ’.

‘ನಾನೇನು ಮಾಡಲಿ ಲಕ್ಷ್ಮಣ, ಎಲ್ಲರ ಮನೆಯೊಳಗೇ ಬಂದು ಆಶೀರ್ವಾದ ಮಾಡಿ ಹೋಗು ತಾಯಿ ಎಂದು ನಿಮ್ಮ ಪ್ರತಿನಿಧಿ, ಮಂತ್ರಿ ಸಂಜಯನೇ ಕೇಳಿದ್ದ, ಹಾಗಾಗಿ ಇತ್ತ ಬಂದೆ’.

‘ಅಯ್ಯೋ ತಾಯಿ, ನಾವೇ ನಿನ್ನ ಸನ್ನಿಧಾನಕ್ಕೆ ಬಂದು, ಪೂಜೆ ಮಾಡಿ ನಿನ್ನ ದರ್ಶನ ಸಹಿತ ಆಶೀರ್ವಾದ ಪಡೆದುಕೊಳ್ಳುತ್ತೇವೆ. ನೀನೇ ನಮ್ಮ‌ ಮನೆ ಬಾಗಿಲಿಗೆ ಬರಬೇಡವಮ್ಮ, ತಡೆದುಕೊಳ್ಳುವ ಶಕ್ತಿ ನಮಗಿಲ್ಲ...’

ಸಂಭಾಷಣೆ ಮುಂದುವರಿದಂತೆ, ಪಕ್ಕದ ಮನೆಯ ಅಬ್ದುಲ್ಲಾನಿಗೂ ಗೋಚರಿಸಿದಳು ಗಂಗಾಮಾತೆ. ಎರಡೂ ಕೈಗಳನ್ನೂ ಮೇಲೆತ್ತಿ ಬೇಡಿಕೊಳ್ಳುವಂತೆ ನಿಂತ ಅಬ್ದುಲ್ಲಾ, ‘ತಾಯಿ, ಹಿಂದೂಗಳೇನೋ ನಿನ್ನ ದರ್ಶನಕ್ಕಾಗಿ
ಬೇಡಿಕೊಂಡಿರಬಹುದು, ಆದರೆ, ಈಗ ನಮ್ಮ ಮನೆಯೊಳಗೂ ಬಂದಿರುವೆಯಲ್ಲ ಮಾತಾ, ನಾವು ಮಾಡಿದ ತಪ್ಪಾದರೂ ಏನು?’ 

‘ಮೂರ್ಖ, ಹರಿಯುವ ನೀರು ನಾನು...
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಭೇದ ತೋರಲಾಗುವುದೇ?’ 

‘ಗಂಗಾಮಾತೆ, ಮೊದಲೇ ಹೇಳಿದಂತೆ, ಕಷ್ಟದಲ್ಲಿದ್ದಾಗ ನಾವೇ ನಿನ್ನ ಸನ್ನಿಧಾನಕ್ಕೆ ಬರುತ್ತೇವೆ. ಬೇಕಿದ್ದರೆ, ನೀನೇ ನೇರವಾಗಿ ನಮ್ಮ ಮಂತ್ರಿ–ಮಹೋದಯರ ಮನೆಗೆ ಹೋಗಿ ದರ್ಶನ ಕೊಡು ತಾಯಿ’ ಎಂದ ಲಕ್ಷ್ಮಣ. 

‘ಅವರು ಎಲ್ಲ ರೀತಿಯೂ ಎತ್ತರದಲ್ಲಿದ್ದಾರಲ್ಲವೇ ಲಕ್ಷ್ಮಣ’.

‘ಜಗನ್ಮಾತೆಯಾದ ನಿನಗೆ ಎತ್ತರದಲ್ಲಿರುವವರನ್ನು ಕೆಳಗಿಳಿಸುವುದು ಕಷ್ಟವೇ ದೇವಿ’ ಎಂದರು ಲಕ್ಷ್ಮಣ–ಅಬ್ದುಲ್ಲಾ. 

ಸಮ್ಮತಿಯ ಭಾವದಲ್ಲಿ ನಸುನಕ್ಕಳು ಗಂಗಾಮಾತೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.