ADVERTISEMENT

ಚುರುಮುರಿ: ಸೋಲೋ ಟ್ರಿಪ್!

ಚುರುಮುರಿ: ಸೋಲೋ ಟ್ರಿಪ್!

ಗುರು ಪಿ.ಎಸ್‌
Published 10 ಜನವರಿ 2024, 19:57 IST
Last Updated 10 ಜನವರಿ 2024, 19:57 IST
<div class="paragraphs"><p>ಚುರುಮುರಿ: ಸೋಲೋ ಟ್ರಿಪ್! </p></div>

ಚುರುಮುರಿ: ಸೋಲೋ ಟ್ರಿಪ್!

   

‘ಬೇಗ ಬೇಗ ನನ್ನ ಲಗೇಜ್ ಎಲ್ಲ ಪ್ಯಾಕ್ ಮಾಡು.‌ ನಾನು ಇವತ್ತು ರಾತ್ರಿಯೇ ಟೂರ್‌ಗೆ ಹೊರಡಬೇಕು’ ಹೆಂಡತಿಗೆ ಆದೇಶಿಸಿದೆ.

ಬಸ್-ವಿಮಾನಗಳ ಟಿಕೆಟ್ ದುಬಾರಿ, ರೆಸಾರ್ಟ್‌ಗಳ ರೆಂಟ್ ಹೆಚ್ಚು, ಮನೆಯಲ್ಲಿ ಎಲ್ಲರೂ ಹೊರಟು ನಿಂತರೆ ಖರ್ಚೂ ಅಧಿಕ ಎನ್ನುವ ಕಾರಣ ಮುಂದುಮಾಡಿ, ನಾಲ್ಕೈದು ಬಾರಿ ಟ್ರಿಪ್ ಕ್ಯಾನ್ಸಲ್ ಮಾಡಿದ್ದ ನನ್ನ ಇತಿಹಾಸದ ಅರಿವಿದ್ದ ಪತ್ನಿ ವ್ಯಂಗ್ಯವಾಗಿ ನನ್ನತ್ತ ನೋಡಿದಳು.

ADVERTISEMENT

‘ಏನು ಹಾಗೆ ನೋಡ್ತಿದೀಯಾ? ನಾನು ಲಕ್ಷದ್ವೀಪಕ್ಕೆ ಹೋಗ್ತಿದೀನಿ. ಸೋಲೋ ಟ್ರಿಪ್’.

‘ಅಲ್ಲಿಗೆ ಯಾಕೆ? ಫಾರಿನ್ ಟೂರೇ ಮಾಡಬಹುದಲ್ಲ’ ಕುಹಕವಾಗಿ ನಕ್ಕಳು ಪತ್ನಿ.

‘ಫಾರಿನ್ ಟೂರೇ ಹೋಗಬೇಕಂತಿದ್ದೆ. ಮಾಲ್ದೀವ್ಸ್‌ಗೆ ಹೋಗೋಕೆ ಎಲ್ಲ ಪ್ಲ್ಯಾನೂ ಮಾಡ್ಕೊಂಡಿದ್ದೆ. ಆದರೆ, ಆ ದೇಶದವರಿಗೆ ಎಷ್ಟು ಸೊಕ್ಕು ನೋಡು, ನಮ್ಮ ದೇಶದ ಟೂರಿಸ್ಟ್‌ಗಳ ಮೇಲೆ ಡಿಪೆಂಡ್ ಆಗಿದ್ದವರು ಈಗ ನಮ್ಮ ವಿರುದ್ಧವೇ ಮಾತಾಡ್ತಿದ್ದಾರೆ. ‘ಇಂಡಿಯಾ ಫಸ್ಟ್’ ಅಂತಿದ್ದವರು ಈಗ ‘ಇಂಡಿಯಾ ವರ್ಸ್ಟ್’ ಅಂತಿದ್ದಾರೆ. ಅದಕ್ಕೇ ನಾನು ಮಾಲ್ದೀವ್ಸ್‌ ಟೂರ್ ಬಾಯ್ಕಾಟ್ ಮಾಡಿದ್ದೀನಿ. ನಮ್ಮ‌ ದೇಶದಲ್ಲೇ ಇರುವ ಲಕ್ಷದ್ವೀಪಕ್ಕೆ ಹೋದರೆ ಅದಾದರೂ ಡೆವಲಪ್ ಆಗುತ್ತೆ’ ದೇಶಾಭಿಮಾನ ಮೆರೆದೆ.‌

‘ನಿಮಗೊಬ್ಬರಿಗೇ ಏನ್ರೀ ದೇಶಾಭಿಮಾನ, ನಮಗೂ ಇದೆ. ನನ್ನನ್ನ ಮತ್ತು ಮಕ್ಕಳನ್ನ ಕೂಡ ಕರ್ಕೊಂಡು ಹೋಗ್ರಿ’ ಹೆಂಡತಿ ದುಂಬಾಲು ಬಿದ್ದಳು.

‘ಲಕ್ಷದ್ವೀಪದಲ್ಲಿ ಬೆಡ್‌ಗಳಿಲ್ವಂತೆ ಕಣೆ. ಇದ್ದಿದ್ದರೆ ಎಲ್ಲರೂ ಹೋಗಬಹುದಿತ್ತು’.

‘ಬಾಯ್ಮುಚ್ರೀ ಸಾಕು. ನಮ್ಮ ರಾಜ್ಯದಲ್ಲೇ ಇರುವ ಮುರ್ಡೇಶ್ವರ, ಮಲ್ಪೆ, ಕೊಡಗು, ಆಗುಂಬೆ, ಭಟ್ಕಳ, ಚಿಕ್ಕಮಗಳೂರು, ಸಕಲೇಶಪುರದಂತಹ ಚಂದದ ತಾಣಗಳಿಗೇ ಕರ್ಕೊಂಡು ಹೋಗಿಲ್ಲ ನೀವು. ಈಗ ದೊಡ್ಡದಾಗಿ ಭಾಷಣ ಬಿಗೀತಾರೆ’ ಹೆಂಡತಿ ರಾಂಗ್ ಆದಳು.

‘ನಿಮ್ಮನ್ನು ಬಿಟ್ಟು ಹೋಗೋಕೆ ನನಗೂ ಮನಸ್ಸಿಲ್ಲ ಕಣೆ. ಹೋಗಲಿ ಬಿಡು, ನನ್ನ ಟ್ರಿಪ್ಪೇ ಕ್ಯಾನ್ಸಲ್ ಮಾಡ್ತೀನಿ’.

‘ಅದೆಂಥದೋ ಟ್ರಿಪ್ ಅಂದ್ರಲ್ಲ ನೀವು ಆಗ’.

‘ಸೋಲೋ ಟ್ರಿಪ್’.

‘ನಿಮ್ಮದ್ಯಾವಾಗಲೂ ಸೋಲೋ ಟ್ರಿಪ್ಪೇ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.