ಶಂಕ್ರಿ, ಸುಮಿ ಒಡವೆ ಅಂಗಡಿಗೆ ಖರೀದಿಗೆ ಬಂದರು.
‘ನಿರ್ಮಲಕ್ಕನ ಬಜೆಟ್‌ನಲ್ಲಿ ಚಿನ್ನದ ಬೆಲೆ ಕುಸಿದಿದೆಯಂತೆ, ನಾಲ್ಕೈದು ಕೆ.ಜಿ. ಒಡವೆ ಕೊಳ್ಳಲು ಚೀಲ ತಂದಿದ್ದೀವಿ’ ಅಂದ ಶಂಕ್ರಿ.
‘ಕೇಜಿಗಟ್ಟಲೆ ಕೊಳ್ಳಲು ಚಿನ್ನವೇನು ಈರುಳ್ಳಿ, ಟೊಮೆಟೊನಾ ಸಾರ್? ಮೂಗಿಗಿಂತ ಮೂಗುತಿ ಭಾರ ಎನ್ನುವಂತಿದೆ ಚಿನ್ನದ ಬೆಲೆ’ ಎಂದರು ಅಂಗಡಿ ಓನರ್.
‘ಬಡವರಿಗೂ ಕೈಗೆಟಕುವಂತೆ ಚಿನ್ನಕ್ಕೂ ರಿಯಾಯಿತಿ ಕೊಡಬೇಕು’ ಸುಮಿ ಆಸೆಪಟ್ಟಳು.
‘ಒಲಿಂಪಿಕ್ಸ್‌ನಲ್ಲಿ ಆಟವಾಡಿದರೆ ಚಿನ್ನದ ಪದಕ ಗೆಲ್ಲಬಹುದು ಮೇಡಂ’ ಅಂದ್ರು ಅಂಗಡಿ ಓನರ್ ಹೆಂಡ್ತಿ.
‘ಯೂನಿವರ್ಸಿಟಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿಯೂ ಬಂಗಾರದ ಪದಕ ಗಳಿಸಬೇಕು’ ಅಂದ ಶಂಕ್ರಿ.
‘ಒಲಿಂಪಿಕ್ ಕೂಟದ ರಿಂಗ್ ಡಿಸೈನಿನ ಸರ, ಓಲೆ, ಹ್ಯಾಂಗಿಂಗ್ಸ್ ತೋರಿಸಲೇ ಮೇಡಂ?’ ಓನರ್ ಕೇಳಿದರು.
‘ಸ್ಪೋರ್ಟ್ಸ್ ಅಂದ್ರೆ ನಿಮಗೆ ಇಷ್ಟನಾ?’ ಸುಮಿ ಕೇಳಿದಳು.
‘ಹೌದು ಮೇಡಂ, ಸ್ಪೋರ್ಟ್ಸ್ ಕೋಟಾದಲ್ಲಿ ನಾನು ಇವಳನ್ನು ಮದ್ವೆಯಾದೆ’ ಓನರ್ ನಾಚಿದರು. ‘ನಮ್ಮದೊಂದು ಲವ್ ಸ್ಟೋರಿ ಇದೆ. ನಾನು ಇವಳನ್ನು ಪ್ರೀತಿಸುತ್ತಿದ್ದೆ. ಇವಳ ತಂದೆಗೆ ನಮ್ಮ ಲವ್ ಇಷ್ಟವಿರಲಿಲ್ಲ. ಒಂದಿನ ಇವಳಿಗೆ ಗುಲಾಬಿ ಹೂ ಕೊಡಲೆಂದು ಇವರ ಮನೆಗೆ ಹೋಗಿದ್ದೆ. ಇವಳ ತಂದೆ ನಾಯಿಯನ್ನು ಛೂ ಬಿಟ್ಟರು. ನಾನು ಓಡಿ ತಪ್ಪಿಸಿಕೊಂಡೆ’.
‘ಆಮೇಲೇನಾಯ್ತು?’
‘ಇವರು ಆಗ ಓಡಿದ್ದ ಸ್ಪೀಡಿನಲ್ಲಿ ಒಲಿಂಪಿಕ್ಸ್
ನಲ್ಲಿ ಓಡಿದ್ದರೆ ಖಂಡಿತಾ ಚಿನ್ನದ ಪದಕ ಸಿಗ್ತಿತ್ತು’.
‘ಛೇ! ಅನ್ಯಾಯ...’
‘ಇವರ ಓಟ ಮೆಚ್ಚಿದ ನನ್ನ ತಂದೆ ಇವರೊಂದಿಗೆ ಮದುವೆ ಮಾಡಿಕೊಟ್ಟು, ಈ ಅಂಗಡಿಯನ್ನು ಉಡುಗೊರೆಯಾಗಿ ಕೊಟ್ಟು ನಮ್ಮ ಬಾಳನ್ನು ಬಂಗಾರ ಮಾಡಿದರು’.
‘ಹೌದು ಸಾರ್, ಅಂಗಡಿಗೆ ಇವಳೇ ಓನರ್, ನಾನು ಸ್ಪ್ಯಾನರ್’ ಓನರ್ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.