ಚಂದ್ರನ ಮೇಲೆ ತಡವರಿಸುತ್ತ ಕಾಲಿಟ್ಟ ತೆಪರೇಸಿ, ‘ಮೆಲ್ಲಕೆ ಇಳೀರಲೆ, ನಾವೇ ಫಸ್ಟ್ ಬರ್ತಿರೋದು... ಇಲ್ಲಿ ಎಲ್ಲೆಲ್ಲಿ ಏನೈತೋ ಗೊತ್ತಿಲ್ಲ’ ಎಂದ. ಹರಟೆ ಸದಸ್ಯರೆಲ್ಲ ಒಬ್ಬೊಬ್ಬರಾಗಿ ಚಂದ್ರನ ಮೇಲಿಳಿದು ಸುತ್ತಲೂ ಕಣ್ಣಾಯಿಸಿದರು.
‘ಇದೇನಲೆ ಇಲ್ಲಿ ಬೆಳದಿಂಗಳೇ ಇಲ್ಲ?’ ಗುಡ್ಡೆಗೆ ಆಶ್ಚರ್ಯ.
‘ಲೇಯ್, ಬೆಳದಿಂಗಳು ಭೂಮಿ ಮ್ಯಾಗೆ ಬೀಳೋದು, ಇಲ್ಲಲ್ಲ’ ತೆಪರೇಸಿ ಸ್ಪಷ್ಟನೆ ಕೊಟ್ಟ.
‘ಅಲ್ಲ ಇದೇನಿದು, ಎಲ್ಲಿ ನೋಡಿದ್ರೂ ಬರೀ ಗುಂಡಿ ಗೊಟರು’.
‘ಇಲ್ಲಿ ಮುನ್ಸಿಪಾಲ್ಟಿಯೋರು ಇಲ್ಲಲ್ಲಲೆ, ಅದ್ಕೆ ಅನ್ಸುತ್ತೆ, ಸುಮ್ನೆ ಬಾ’.
‘ಅಲ್ಲ, ಇಲ್ಲಿ ನಾವೇ ಮೊದ್ಲೋ ಅಥ್ವ ನಿಮ್ ಟೀವಿಯೋರು ಮೈಕ್ ಹಿಡ್ಕಂಡು ಆಗ್ಲೇ ಬಂದುಗಿಂದಾರೋ?’ ದುಬ್ಬೀರ ನಕ್ಕ.
‘ಅಬಾಬಬ... ಅಲ್ಲಿ ನೋಡ್ರಲೆ, ಗುರು, ಶುಕ್ರ, ಮಂಗಳ ಎಲ್ಲ ಎಷ್ಟು ಹತ್ತಿರದಿಂದ ಕಾಣ್ತದಾವು. ಭೂಮಿನೂ ಐತಲ್ಲೋ’ ತೆಪರೇಸಿಗೆ ಆಶ್ಚರ್ಯ.
‘ಅದ್ರಾಗೆ ನಿನ್ನೆಂಡ್ತಿ ಕಾಣ್ತದಾಳೇನೋ ನೋಡೋ’ ಕೊಟ್ರೇಶಿ ಕಿಸಕ್ಕೆಂದ.
‘ಇಲ್ಲಿ ಸೈಟ್ ಮಾಡಿದ್ರೆ ಭರ್ಜರಿ ರೊಕ್ಕ ಆಗ್ತಾವು ಕಣ್ರಲೆ’ ಗುಡ್ಡೆ ಒಳಗೇ ಲೆಕ್ಕ ಹಾಕಿದ.
‘ಅಲ್ಲ, ಇಲ್ಲಿ ಹೋಟ್ಲು ಮಾಡಿದ್ರೆ ನಡೀತತಾ?’ ಮಂಜಮ್ಮಗೆ ಡೌಟು.
‘ಹಂಗೇ ಈರುಳ್ಳಿ, ಟಮೊಟೋ ಬೆಳೆದ್ರೆ ಹೆಂಗೆ?’ ದುಬ್ಬೀರ ಕೇಳಿದ.
‘ನಿಮ್ತೆಲಿ, ಚಂದ್ರನ ಮೇಲೆ ಬಂದ್ರೂ ನಿಮ್ ಚಿಲ್ರೆ ಬುದ್ಧಿ ಬಿಡಲ್ಲಲ್ರಲೆ. ಮೊದ್ಲು ಖುಷಿಗೆ ಪಾರ್ಟಿ ಮಾಡಾಣ, ಆಮೇಲೆ ಎಲ್ಲ ನೋಡಾಣ’ ಎಂದ ತೆಪರೇಸಿ, ಬ್ಯಾಗಿನಿಂದ ಒಂದೊಂದೇ ಐಟಂ ಹೊರತೆಗೆದ. ಎಲ್ರಿಗೂ ಗುಂಡು ಹಾಕಿಕೊಟ್ಟು ಕಪ್ಪೆತ್ತಿ ‘ಚಿಯರ್ಸ್!’ ಎಂದ.
ಇದ್ದಕ್ಕಿದ್ದಂತೆ ತೆಪರೇಸಿ ತಲೆ ಮೇಲೆ ಯಾರೋ ಬಕೆಟ್ ನೀರು ಸುರಿದಂತಾಗಿ ಬೆಚ್ಚಿ ಕಣ್ಣು ಬಿಟ್ಟ. ನೋಡಿದರೆ ಎದುರಿಗೆ ಹೆಂಡ್ತಿ ಪಮ್ಮಿ! ‘ಏನದು ಚಿಯರ್ಸ್? ಕನಸಾ? ಯಾವ ಲೋಕದಾಗಿದ್ರಿ?’
ತೆಪರೇಸಿ ತಡವರಿಸಿದ ‘ಅಲ್ಲ, ನೀನ್ಯಾವಾಗ ಇಲ್ಲಿಗೆ ಬಂದೆ? ನನ್ ಕಪ್ ಎಲ್ಲಿ?’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.