ಶಂಕ್ರಿ ಮೊಬೈಲ್ ರಿಂಗ್ ಆಯ್ತು. ರಿಸೀವ್ ಮಾಡಿ ‘ಹಲೋ...’ ಅಂದ.
‘ನಾನು ಮಧು, ನಿಮ್ಮ ಫ್ರೆಂಡು...’ ಮಧುರವಾದ ಧ್ವನಿ ಕೇಳಿಸಿತು.
‘ಯಾವ ಮಧು? ನೀವು ಯಾರೂಂತ ಗೊತ್ತಾಗುತ್ತಿಲ್ಲ’.
‘ರೀ, ಯಾರ ಫೋನ್?’ ಸುಮಿ ಕೇಳಿದಳು. ‘ಯಾರೋ ಮಧು ಅಂತೆ’ ಎಂದ. ಸುಮಿ ಮೊಬೈಲ್ ಈಸ್ಕೊಂಡು, ‘ಹಲೋ, ಯಾರು ನೀವು?’ ಕೇಳಿದಳು.
‘ನಿಮ್ಮ ಗಂಡನ ಫ್ರೆಂಡ್, ಅವರು ನನ್ನನ್ನು ಮರೆತೇಬಿಟ್ಟಿದ್ದಾರೆ’ ಅಂದಳು ಮಧು.
‘ಅವರಿಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಈರುಳ್ಳಿ ತರಲು ಹೇಳಿದರೆ ಬೆಳ್ಳುಳ್ಳಿ ತರ್ತಾರೆ. ಅದ್ಸರಿ, ಯುಗಾದಿಗೆ ಹೊಸ ಸೀರೆ ತಗೊಂಡ್ರಾ?’
‘ತಗೊಂಡೆ, ನೀವು ಗಂಡನ ಜೊತೆ ಹೋಗಿ ಸೀರೆ ಕೊಂಡುಕೊಂಡ್ರಾ?’
‘ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೆ, ಸೀರೆ ಅಂಗಡಿಯಲ್ಲಿ ಗಂಡನಿಗೆ ಏನು ಕೆಲ್ಸ ಇರುತ್ತೆ? ನಾನೊಬ್ಬಳೇ ಹೋಗಿ ತಂದೆ’.
‘ಗಂಡಸರು ಸೀರೆ ಅಂಗಡಿಯಲ್ಲೂ ಸಲ್ಲುವುದಿಲ್ಲ, ಸರ್ಕಾರದಲ್ಲೂ ಸಲ್ಲುವುದಿಲ್ಲ. ಸರ್ಕಾರ ನಮಗೆ ಉಚಿತ ಭಾಗ್ಯಗಳನ್ನು ಕೊಡ್ತಿದೆ, ಗಂಡಸರಿಗೆ ಒಂದು ಶೇವಿಂಗ್ ಬ್ಲೇಡನ್ನೂ ಫ್ರೀಯಾಗಿ ಕೊಟ್ಟಿಲ್ಲ, ಪಾಪ!’
‘ಗಂಡಸರಿಗೆ ಉಚಿತವಾಗಿ ಮದ್ಯ ಕೊಡಬೇಕು ಅಂತ ಶಾಸಕರೊಬ್ಬರು ಅಸೆಂಬ್ಲಿಯಲ್ಲಿ ಕೇಳಿಕೊಂಡರಲ್ಲ, ಮದ್ಯ ಕೊಟ್ಟರೆ ಸಂಸಾರ ಉಳಿಯುತ್ತೇನ್ರೀ?’
‘ಸರ್ಕಾರ ಎಣ್ಣೆ ಭಾಗ್ಯ ಕೊಡುವುದಿಲ್ಲ ಬಿಡಿ, ಗಂಡಸರಿಗೆ ಸರ್ಕಾರಿ ಭಾಗ್ಯ ಪಡೆಯುವ ಯೋಗವೂ ಇಲ್ಲ. ಪಾಪ, ಗಂಡಸರ ಗ್ರಹಚಾರವೇ ಸರಿಯಿಲ್ಲ’.
‘ಹೌದೂರೀ, ಗಂಡಸರಿಗೆ ಮಧುಬಲೆ ಕಾಟ ಶುರುವಾಗಿದೆಯಂತೆ. ಮಂತ್ರಿ, ಶಾಸಕರನ್ನೂ ಬಿಟ್ಟಿಲ್ಲವಂತೆ. ಅದಕ್ಕೆ ಹೆದರಿ ಕೆಲವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಇಟ್ಟುಕೊಂಡಿದ್ದಾರಂತೆ!’
‘ಹೌದಾ?!’
‘ಅಯ್ಯೋ ಮಂಕೆ, ಹಣ, ಅಧಿಕಾರ ಇಲ್ಲದ ನನ್ನ ಗಂಡನಿಗೆ ‘ಮಧುಬಲೆ’ ಬೀಸಿದರೆ ನೀನೇ ಫೂಲ್ ಆಗ್ತೀಯ!’ ಎಂದು ಸುಮಿ ನಕ್ಕಳು.
ಮಧು ಕೂಡಲೇ ಫೋನ್ ಕಟ್ ಮಾಡಿದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.