ಚುರುಮುರಿ: ಮಕ್ಕಳಿರಲವ್ವ...
ಸರ್ಕಾರಿ ಶಾಲೆಯ ಫಲಿತಾಂಶ ಹಾಗೂ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ದೊಡ್ಡ ಸಾಹೇಬ್ರು ಆದೇಶ ಮಾಡಿದ್ದರು. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರ ಮನವೊಲಿಸಲು ಮೇಷ್ಟ್ರುಗಳ ಜೊತೆ ಅಧಿಕಾರಿಗಳು ಶಂಕ್ರಿ ಮನೆಗೆ ಬಂದರು.
‘ಮಕ್ಕಳಿರಲವ್ವ ಶಾಲೆ ತುಂಬಾ ಅನ್ನೋ ಆಂದೋಲನ ಮಾಡ್ತಿದ್ದೀವಿ. ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ?’ ಚಿಕ್ಕ ಸಾಹೇಬ್ರು ಕೇಳಿದ್ರು.
‘ದೊಡ್ಡ ಸ್ಕೂಲು ಸಾರ್, ನಾಲ್ಕು ಫ್ಲೋರ್ ಬಿಲ್ಡಿಂಗ್, ಒಳ್ಳೊಳ್ಳೆ ಟೀಚರ್‌ಗಳಿದ್ದಾರೆ’ ಶಂಕ್ರಿಗೆ ಹೆಮ್ಮೆ.
‘ಆ ಟೀಚರ್‌ಗಳು ನಮಗೆ ಅರ್ಥವಾಗದಷ್ಟು ಚೆನ್ನಾಗಿ ಇಂಗ್ಲಿಷ್ ಮಾತಾಡ್ತಾರೆ’ ಸುಮಿಗೂ ಖುಷಿ.
‘ಸ್ಕೂಲ್ ಫೀಸ್ ಕಟ್ಟಿದ್ದೀರ?’
‘ಮೂರು ಕಂತು ಕಟ್ಟಲು ಅವಕಾಶ ಮಾಡಿಕೊಟ್ಟಿದ್ದಾರೆ. ಒಡವೆ ಅಡವಿಟ್ಟು ಮೊದಲ ಕಂತು ಕಟ್ಟಿದ್ದೀವಿ’.
‘ನಿಮ್ಮ ಮಕ್ಕಳನ್ನ ಆ ಸ್ಕೂಲ್ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸಿ’.
‘ಯಾಕೆ ಸಾರ್? ನಮ್ಮ ಮಕ್ಕಳು ಏನು ಅನ್ಯಾಯ ಮಾಡಿದ್ದಾರೆ?’ ಸುಮಿಗೆ ಸಿಟ್ಟು.
‘ಸರ್ಕಾರಕ್ಕೆ ಅನ್ಯಾಯ ಆಗ್ತಿದೆ. ಸರ್ಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಸಮವಸ್ತ್ರ, ಸೈಕಲ್, ಬಿಸಿಯೂಟ ಕೊಡುತ್ತಿದೆ. ಖಾಸಗಿ ಶಾಲೆಗಳಂತೆ ಲಕ್ಷಾಂತರ ರೂಪಾಯಿ ಫೀಸ್ ಕೇಳುವುದಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದರೆ ಹಲವು ರೀತಿಯ ಅನುಕೂಲಗಳಿವೆ’ ಮನವೊಲಿಸುವ ಪ್ರಯತ್ನ ಮಾಡಿದರು.
‘ನಿಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರಾ ಸಾರ್?’ ಶಂಕ್ರಿ ಕೇಳಿದ. ಸಾಹೇಬ್ರಿಗೆ ಕಸಿವಿಸಿಯಾಯಿತು. ‘ಅದೆಲ್ಲಾ ಕೇಳಬಾರದು’ ಅಂದರು.
‘ಅಕ್ಕಪಕ್ಕದ ಮಕ್ಕಳು ದೊಡ್ಡ ಬಿಲ್ಡಿಂಗ್ ಸ್ಕೂಲಿಗೆ ಸೇರಿ ಮೆರೆದರೆ ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದೆವೆಂದು ನೊಂದುಕೊಳ್ಳೋದಿಲ್ವಾ? ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ನಾವೂ ಸೇರಿಸ್ತೀವಿ’.
‘ಸರಿಬಿಡಿ, ನೆರೆಹೊರೆಯವರ ಮನವೊಲಿಸುವ ಪ್ರಯತ್ನ ಮಾಡ್ತೀವಿ’ ಎಂದು ಹೇಳುತ್ತಾ ಸಾಹೇಬ್ರು ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.