ADVERTISEMENT

ಚುರುಮುರಿ: ಉಗ್ರರು ಉಡೀಸ್‌...

ಚುರುಮುರಿ

ಗುರು ಪಿ.ಎಸ್‌
Published 7 ಮೇ 2025, 19:09 IST
Last Updated 7 ಮೇ 2025, 19:09 IST
ಚುರುಮುರಿ
ಚುರುಮುರಿ   

‘ಜೈ ಹಿಂದ್...’ ಟಿ.ವಿ. ನೋಡುತ್ತಾ ಕೂಗಿದಳು ಹೆಂಡತಿ. ಇನ್ನೂ ನಿದ್ದೆಗಣ್ಣಲ್ಲಿ ಇದ್ದ ನಾನೂ ‘ಜೈ ಹಿಂದ್’ ಎಂದು ಅರಿವಿಲ್ಲದೆ ಕೂಗುತ್ತಾ, ‘ಏನಾಯ್ತೆ ನಿನಗೆ ಹೀಗೆ ಕೂಗ್ತಿದ್ದೀಯ’ ಎಂದೆ.

‘ಆಪರೇಷನ್ ಸಿಂಧೂರ...’

‘ಅಂದ್ರೆ?’

ADVERTISEMENT

‘ನಮ್ಮ ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನೆಲ್ಲ ಉಡೀಸ್ ಮಾಡಿದೆ’ ಯುದ್ಧ ಗೆದ್ದ ಸಂಭ್ರಮದಲ್ಲಿ ಹೇಳಿದಳು ಹೆಂಡತಿ.

‘ಹೇಗೆ ದಾಳಿ ಮಾಡಿದ್ದಾರೆ?’

‘ಮಧ್ಯರಾತ್ರಿ ಏರ್‌ಸ್ಟ್ರೈಕ್, ಕ್ಷಿಪಣಿ ದಾಳಿ’ ಉತ್ಸಾಹದಿಂದ ಹೇಳಿದಳು.

‘ಅಯ್ಯೋ ಪಾಪ?’ ಎಂದೆ ಬೇಸರದಲ್ಲಿ.

‘ಪಾಪ! ಯಾರಿಗೆ ರೀ ಪಾಪ ಅಂತಿದ್ದೀರಿ, ಅಮಾಯಕರನ್ನು ಸಾಯಿಸಿದವರ ಮೇಲೆ ನಿಮಗೇನಿಷ್ಟು ಅನುಕಂಪ?’

‘ಏನೇ ಆಗಲಿ, ಯುದ್ಧಕ್ಕಿಂತ ಶಾಂತಿ ಮುಖ್ಯ. ನಮ್ಮದು ಶಾಂತಿಪ್ರಿಯ ದೇಶ’.

‘ಅದಕ್ಕೇ ಟೆರರಿಸ್ಟ್‌ಗಳ ಮೇಲಷ್ಟೇ ಅಟ್ಯಾಕ್ ಮಾಡಿರೋದು, ಪಾಕಿಸ್ತಾನದ ಜನಗಳ ಮೇಲೆ ಮಾಡಿಲ್ಲ’.

‘ಆದರೂ ಅವರು ಮಲಗಿರುವಾಗ ದಾಳಿ ಮಾಡಿದ್ದು ಸರಿ ಕಾಣಿಸ್ತಿಲ್ಲ’ ಶಾಂತಿಪ್ರಿಯನಂತೆ ಹೇಳಿದೆ.

‘ಅವರು ಎದ್ದ ಮೇಲೆ ಅವರಿಗೆ ಊಟ-ತಿಂಡಿ ಎಲ್ಲ ಕೊಡಿಸಿ, ಹೊಸ ಬಟ್ಟೆ ತೊಡಿಸಿ ಆಮೇಲೆ ಅಟ್ಯಾಕ್ ಮಾಡಬೇಕಿತ್ತಾ?’ ವ್ಯಂಗ್ಯವಾಡಿದಳು.

‘ಆದರೂ, ದೇಶದಲ್ಲಿ ಅಣಕು ಸಮರಾಭ್ಯಾಸ ಮಾಡ್ತೀವಿ ಅಂತ ಹೇಳಿ, ಉಗ್ರರ ಮೇಲೆ ರಿಯಲ್ ಅಟ್ಯಾಕ್ ಮಾಡಬಾರದಿತ್ತು’ ಕರುಣಾರಸದಲ್ಲಿ ಹೇಳಿದೆ.

‘ಅವನ್ಯಾರೋ ಉಗ್ರ, ಹೋಗಿ ಮೋದಿಗೆ ಹೇಳು ಅಂದಿದ್ದನಂತಲ್ಲ, ಅದಕ್ಕೇ ಮೋದಿ ಬೆಳಗಾಗೋದರೊಳಗೆ ದೀಪಾವಳಿ ಮಾಡಿ ತೋರಿಸಿದ್ದಾರೆ’ ಹೆಮ್ಮೆಯಿಂದ ಹೇಳಿದಳು.

‘ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡ್ತೀರಿ ಓಕೆ, ದೇಶದಲ್ಲಿನ ಭ್ರಷ್ಟರ ಮೇಲೆ ದಾಳಿ ಯಾವಾಗ?’

‘ಅದು ಸೇನೆ ಕೆಲಸ ಅಲ್ಲ, ಜನರ ಕೆಲಸ. ಎಲೆಕ್ಷನ್ ಬಂದಾಗ ಜನರೇ ಆ ಕೆಲಸ ಮಾಡಬೇಕು’ ಎನ್ನುತ್ತಾ ಟಿ.ವಿ. ಕಡೆ ಮುಖ ಮಾಡಿದಳು ಹೆಂಡತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.