‘ಏನ್ರಲಾ, ಇವತ್ತು ವಿಶ್ವ ಯೋಗ ದಿನ... ಎಲ್ಲಾ ಯೋಗ ಮುಗುಸ್ಕೊಂಡ್ ಬಂದ್ರೋ ಎಂಗೆ?’ ಮಾತು ತೆಗೆದ ಮಾಲಿಂಗ.
‘ಅಯ್ಯೋ! ದಿನಾ ಸಂಸಾರದಲ್ಲಿ ಯೇಗೋನಿಗೆ ಯಾವ ಯೋಗನ್ಲಾ? ಕುಕ್ಕರಕಾಲಲ್ಲಿ ಕುಂತ್ಕಂಡು ಪಾತ್ರೆ ತೊಳೆದು, ಬಟ್ಟೆ ಒಗುದ್ರೆ ಕುಕ್ಕುಟಾಸನ, ಬಗ್ಗಿ ಇಡೀ ಮನೆ ಒರೆಸುದ್ರೆ ದಂಡಾಸನ, ಮನೆ ಶಲಬೆ ತೆಗುದ್ರೆ ಶಲಬಾಸನ ಹೀಗೆ ಎಲ್ಲಾ ಸರ್ವಾಂಗಾಸನಗಳನ್ನೂ ಮಾಡಿದಂಗಾಗುತ್ತೆ’ ಎಂದ ಗುದ್ಲಿಂಗ.
‘ಹೌದು, ಈ ಯೋಗಕ್ಕೂ ಆಸನಕ್ಕೂ ಏನ್ಲಾ ವ್ಯತ್ಯಾಸ?’ ಕಲ್ಲೇಶಿ ಕೇಳಿದ.
‘ಲೇಯ್ ಬಡತ್ತುದೇ, ಅಷ್ಟೂ ಗೊತ್ತಿಲ್ವೇನ್ಲಾ?
ದಣೀದಂಗೆ ಸುಮ್ಕೆ ಬರೋದು ಯೋಗ, ಅದು ಅಸಾಮಾನ್ಯರಿಗೆ!’ ದಣಿದು ಮಾಡೋದು ಶ್ರೀಸಾಮಾನ್ಯರ ಆಸನ’.
‘ಒಗಟೊಗಟಾಗಿ ಯೋಳ್ದೆ ಸ್ವಲ್ಪ ಬಿಡ್ಸಿ ಯೋಳ್ಳಾ...’
‘ನೋಡ್ರುಲಾ, ಬೇರೆ ಪಕ್ಷದಿಂದ ಹರ‍್ಕಂಡು ಬಂದು ಮಂತ್ರಿ ಆಗಾದು, ಹಳೆಬ್ರನ್ನೆಲ್ಲ ಮೂಲೆಗುಂಪಾಗ್ಸಿ ಅಧ್ಯಕ್ಷ ಆಗೋದು,ಸದಾ ಹಗರಣಗಳಲ್ಲೇ ಬಿದ್ದು ಹೊಳ್ಳಾಡ್ತಿದ್ರೂ ಆಯೋಗ ನೇಮಕ ಆಗ್ದೇ ಬಚಾವ್ ಆಗಾದು, ಕುತ್ತಿಗೆಗೆ ಬಂದ ಸಿಬಿಐ ಕೇಸ್‌ಗೆ ಸರ್ಕಾರ ಅನುಮತಿ ಕೊಡ್ದೇ ಇರಾದು, ಎಂಎಲ್‌ಎ ಸೀಟು ಬರಕಾಸ್ತಾಯ್ತು ಅಂತ ಉಪ ಚುನಾವಣೆಗೆ ರೆಡಿಯಾಗೋ ಹೊತ್ಗೆ ಜೈಲಲ್ಲಿದ್ದ ನಾಯಕ ಶಿರೋಮಣಿಗೆ ಜಾಮೀನ್ ಸಿಗೋದು ಇವೆಲ್ಲಾ ಯೋಗ ಕಣ್ರಲಾ’.
‘ಶ್ರೀಸಾಮಾನ್ಯರ ಆಸನ ಅಂದ್ರೆ?’
‘ಅವೇನ್ ಒಂದಾ ಎಲ್ಡಾ? ಯಾವ ಗುರು ಹಂಗೂ ಇಲ್ದೆ ದಿನವೆಲ್ಲಾ ಈ ಪಟ್ಟುಗಳನ್ನ ಆಕ್ತಾನೇ ಇರ‍್ತೀವಿ. ಧರಣಿ ಮುಷ್ಕರ ಮಾಡಕ್ಕೆ ಏಕಪಾದಾಸನ, ಆ ಮೇಲೆ ಗಂಡುಸ್ರು ಬಸ್ ಮೆಟ್ರೊ ಹಿಡಿಯಕ್ಕೆ, ಟೇಬಲ್ ಕೆಳಗೆ ಮಾಮೂಲಿ ತಗಳಕ್ಕೆ ತ್ರಿಕೋನಾಸನ, ಹೋಟ್ಲು, ಮಾಲು ಬಿಲ್ ಎತ್ತೋಕೆ ಧನುರಾಸನ, ಮಕ್ಕಳ ಸ್ಕೂಲ್ ಬ್ಯಾಗ್ ಹೊರಕ್ಕೆ ಭುಜಂಗಾಸನ, ರಾತ್ರಿ ಎಣ್ಣೆ ಹೊಡೆದ್ ಮೇಲೆ ತಾಡಾಸನ, ಕೊನೆಗೆ ಕಪಾಳ ಭಾತಿ’
‘ಅದ್ಯಾಕೆ ಇವೆಲ್ಡೂ ಕೊನೆಗೆ?’
‘ತಾಡಾ ಅಂದ್ರೆ ಪಾಮ್, ಈಚಲ, ತಾಡಾಸನ ಅಂದ್ರೆ ಎಣ್ಣೆ ಹಾಕಿ ಅಲ್ಲಡದಂಗೆ ನಿಂತ್ಕೊಳಾದು’.
‘ಹೌದೌದು, ಮಿಸ್ಸಾಗಿ ಬೀದೀಲೇ ಬಿದ್ರೆ ಶವಾಸನ. ಮನೆ ತಲುಪುದ್ರೆ ಕಪಾಳ ಭಾತಿ ಅಂದ್ರೆ ಹೆಂಡತಿ ಕಪಾಳಕ್ಕೆ ಹೊಡೆದು ಬಾತುಕೊಳ್ಳುತ್ತೆ’ ಎಂದ ರೇಶ್ಮಿ. ಎಲ್ಲಾ ಗೊಳ್ಳನೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.