ADVERTISEMENT

ಚುರುಮುರಿ | ರಾಜಕೀಯ ಅಂದ್ರೆ...

ಬಿ.ಎನ್.ಮಲ್ಲೇಶ್
Published 29 ಮೇ 2025, 23:30 IST
Last Updated 29 ಮೇ 2025, 23:30 IST
   

‘ಮಂಜಮ್ಮ, ಈ ‘ರಾಜಕೀಯ ಮಾಡ್ತಾನೆ’ ಅಂತಾರಲ್ಲ, ಹಂಗಂದ್ರೆ ಏನು? ಏನರ್ಥ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಅದಕ್ಕೆ ನಮು ನಮೂನಿ ಅರ್ಥ
ಅದಾವು. ಹೋಲ್‌ಸೇಲಾಗಿ ಹೇಳ್ಬೇಕಂದ್ರೆ, ಮಾಡಬಾರದ್ದನ್ನ ಮಾಡ್ತಾನೆ ಅಂತ ಅರ್ಥ’ ಮಂಜಮ್ಮ ನಕ್ಕಳು.

‘ಮತ್ತೆ ರಾಜಕಾರಣಿ ಅಂದ್ರೆ ಮಾಡಬಾರದ್ದನ್ನ ಮಾಡೋನು ಅಂತಾನಾ?’

ADVERTISEMENT

‘ಎಲ್ಲರೂ ಹಂಗಿಲ್ಲ, ಕೆಲವರು ಒಳ್ಳೇರದಾರೆ’.

‘ಅದಿರ್‍ಲಿ, ಇದು ಗೊತ್ತಾ? ನಮ್ ಇಬ್ರು ನಾಯಕರು ರಾಜ್ಯದಲ್ಲಿ ರಾಜಕಾರಣದ ಕಾಲೇಜು ಶುರು ಮಾಡ್ತಾರಂತೆ. ಒಳ್ಳೇ ರಾಜಕಾರಣಿಗಳನ್ನ ತಯಾರು ಮಾಡ್ತಾರಂತೆ, ಪೇಪರಲ್ಲಿ ಬಂದಿತ್ತು’ ತೆಪರೇಸಿ ಹೇಳಿದ.

‘ಹೌದಾ? ಏನೇನ್ ಕಲಿಸ್ತಾರಂತೆ ಅಲ್ಲಿ?’

‘ಸಿಲೆಬಸ್ ಬಾಳ ಐತಂತೆ, ಮೊದಲನೇ ಪಾಠ ‘ರಾಜಕಾರಣ ಅಂದ್ರೇನು?’

‘ರಾಜಕಾರಣ ಅಂದ್ರೆ ದುಡ್ಡು ಮಾಡೋದು. 5+5=100! ಅಂದ್ರೆ ಐದು ರೂಪಾಯಿ ಬಂಡವಾಳ, ಐದು ವರ್ಷ ಅಧಿಕಾರ, ನೂರು ರೂಪಾಯಿ ಲಾಭ!’ ಗುಡ್ಡೆ ನಕ್ಕ.

‘ಕರೆಕ್ಟ್ ಹೇಳಿದಿ ಕಣಲೆ, ಬೇರೇನು ಪಾಠ ಅದಾವಂತೆ?’ ದುಬ್ಬೀರ ಕೇಳಿದ.

‘ಕೆಟ್ಟ ಮಾತು ಆಡಬಾರದು, ಆಡಿದ ಮೇಲೆ ‘ನಾ ಹಂಗೆ ಹೇಳೇ ಇಲ್ಲ’ ಅನ್ನಬಾರದು, ಕೆಟ್ಟದ್ದನ್ನ (ಮೊಬೈಲ್‌ನಲ್ಲಿ) ನೋಡಬಾರದು, ಕಮಿಷನ್, ಲಂಚ, ತಗಾಬಾರದು, ಮಂತ್ರಿಗಿರಿಗೆ ಲಾಬಿ ಮಾಡಬಾರದು, ಮುಖ್ಯಮಂತ್ರಿ ಸೀಟಿಗೆ ಟವೆಲ್ ಹಾಕಬಾರದು. ಚುನಾವಣೇಲಿ ಹಣ, ಕುಕ್ಕರು-ಲಿಕ್ಕರು ಹಂಚಬಾರದು, ಗೆದ್ದ ಮೇಲೆ ಬೆಂಗಳೂರು ಸೇರಬಾರದು, ಸೋತರೆ ಎಂಎಲ್ಸಿ ಕೇಳಬಾರದು, ವಂಶಪಾರಂಪರ್ಯ ರಾಜಕಾರಣ ಮಾಡಬಾರದು’.

‘ಸ್ಟಾಪ್... ಇದೆಲ್ಲ ಸಾಧ್ಯನಾ? ಕಾಲೇಜಿನಾಗೆ ಪಾಠ ಹೇಳಿಬಿಟ್ರೆ ಉತ್ತಮ ರಾಜಕಾರಣಿ ಆಗಿಬಿಡ್ತಾರಾ?’ ಕೊಟ್ರೇಶಿ ಆಕ್ಷೇಪಿಸಿದ.

‘ಯಾಕೆ ಆಗಲ್ವಾ?’

‘ನಿನ್ತೆಲಿ, ಕಾಲೇಜಿನಾಗೆ ಕಲಿತ ರಾಜಕಾರಣ, ಪುಸ್ತಕದ ಬದನೆಕಾಯಿ ಎರಡೂ ಒಂದೇ... ಕೆಲ್ಸಕ್ಕೆ ಬರಲ್ಲ...’

ಕೊಟ್ರೇಶಿ ಮಾತಿಗೆ ಯಾರೂ ಪಿಟಿಕ್ಕನ್ನಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.