ADVERTISEMENT

ಚುರುಮುರಿ: ಸು ಫ್ರಮ್‌ ಸೋ!

ತುರುವೇಕೆರೆ ಪ್ರಸಾದ್
Published 10 ಆಗಸ್ಟ್ 2025, 23:30 IST
Last Updated 10 ಆಗಸ್ಟ್ 2025, 23:30 IST
   

‘ಅಂತೂ ಇಂತೂ ಪೇಟಾನೇ ಗೆದ್ ಬಿಡ್ತು’ ಎಂದು ಸಿಬಿರೆಬ್ಬಿದ ಗುದ್ಲಿಂಗ ಹರಟೇಕಟ್ಟೇಲಿ!

‘ಪಾಪ! ಮೈಸೂರ್ ಪೇಟ, ಅದನ್ನ ಧರಿಸಿದ ರಾಜ್ರನ್ನ ಸುಮ್ನೆ ವಿವಾದಕ್ ಎಳೀತಾವ್ರೆ ನಮ್ ರಾಜಕೀಯದೋರು’ ಎಂದ ಮಾಲಿಂಗ.

‘ಪೀಠ ಗಟ್ಟಿಯಾಗಿರ‍್ಬೇಕು ಅಂದ್ರೆ ಇಂಗೆ ಅವಾಗವಾಗ ಅವರಿವರ ಪೇಟನ ಟೋಪಿ ಮಾಡ್ಬೇಕಾಯ್ತದೇ ಕಣ್ಲಾ’ ಎಂದ ಕಲ್ಲೇಶಿ.

ADVERTISEMENT

‘ಏಯ್, ನಾನು ಯೋಳ್ತಿರೋದು ಆ ಪೇಟ ಅಲ್ಲ, ಅದೇ ಈ ಪ್ರಾಣಿ ಪಕ್ಷಿಗುಳ್ಗೆ ಇಂಸೆ ಆಗ್ದಂಗೆ ನೋಡ್ಕತರಲ್ಲ, ಆ ಪೇಟಾ ಬಗ್ಗೆ. ಅವರು ಜೈನಮಠದಲ್ಲಿದ್ದ ಮಾಧುರಿ ಹೆಸರಿನ ಆನೇನ ಕೊಲ್ಹಾಪುರದಿಂದ ಕಳಿಸಿಬುಟ್ರಲ್ಲ, ಅದ್ನ ಯೋಳಿದ್ದು...’

‘ಕರಿ ಆನೆಗಳಿಗೆ ಅಯ್ಯೋ ಅಂತಾರೆ. ಬಿಳಿ ಆನೆಗಳು ಇಡೀ ದೇಶನೇ ಅಭಯಾರಣ್ಯ ಮಾಡ್ಕಂಡು
ಮೇಯ್ತವೆ’.

‘ಆದ್ರೂ ಪೀಠ ಸಂಘರ್ಷ ಬಂದಾಗ ಅವರನ್ನೂ ಸ್ಟೇಟಿಂದ ಸೆಂಟ್ರಲ್ಗೆ ಎತ್ತಂಗಡಿ ಮಾಡಕಿಲ್ವಾ?’

‘ವೂ ಕಣ್ಲಾ! ಇಂಗೇ ನಮ್ ಖರ್ಗೆ ಸಾಹೇಬ್ರು ಪೀಠ ಮಿಸ್ ಮಾಡ್ಕಂಡಿದ್ದು. ಇದಕ್ಕೂ ಒಂದು ಇಂಟರ್‌ನಲ್ ಪೇಟಾ (ಪೀಠ ಎಡವಟ್ಟು ತನಿಖಾ ಅಥಾರಿಟಿ) ಮಾಡ್ಬೇಕು’.

‘ಕಮಲ ಪಾಳೆಯದಾಗೆ ಆ ತರ ಪೇಟಾ ವಿಂಗ್ ಚೆನ್ನಾಗೇ ಕೆಲಸ ಮಾಡ್ತಾ ಐತೆ!’

‘ವೂ! ಅವರಿಗೆ ಹಸು ಕರು ಅಂದ್ರೆ ಬಾಳಾ ಪ್ರೀತಿ ಅಲ್ವಾ?’

‘ಅವರೂ ಉಲ್ಟಾ ಒಡೆದವ್ರೆ... ಅಂಗ್ ಅಭಿಮಾನ ಇದ್ದಿದ್ರೆ ಧನಕರುನ ಅರ್ಧಕ್ಕೆ ಪೀಠದಿಂದ ಇಳುಸ್ತಿದ್ರೇನ್ಲಾ?’

‘ನೀ ಯೋಳೋದೂ ನಿಜನೇ ಬುಡು! ಜನ–ಧನ ಮೂಲಕ ಕಮಲ ಎಲೆಕ್ಷನ್ನಾಗೆ ಮೋಸ ಮಾಡೈತೆ ಅಂತ ರಾಹುಲಣ್ಣ ಸಿನಿಮಾ ತೋರ‍್ಸವ್ರಲ್ಲ?’

‘ಆದ್ರೆ ಇಷ್ಟು ದಿನ ಯಾಕ್ ಲೇಟು?’

‘ಮೇಲಿಂದ ಮೇಲೆ ‘ಸು ಫ್ರಮ್‌ ಸೋ’ ಬತ್ತಿದ್ರೆ ಬೇರೆ ಕೇವ್ ಎಲ್ ಮಾಡಕಾಯ್ತದೆ ಅಂತಾವ್ರೆ ಕೈ ಮುಖಂಡ್ರು’.

‘ಸು ಫ್ರಮ್‌ ಸೋ ಅಂದ್ರೆ?’

‘ಸುರ್ಜೇವಾಲಾ ಫ್ರಂ ಸೋನಿಯಾ’ ಎಂದ ಪರ‍್ಮೇಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.