ADVERTISEMENT

ಚುರುಮುರಿ | ಶಕ್ತಿ ಪ್ರದರ್ಶನ

ಲಿಂಗರಾಜು ಡಿ.ಎಸ್
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
   

‘ನಮ್ಮ ರಾಜಕೀಯ ಪಕ್ಷಗಳ ತಿಮಿರು ನೋಡಿದ್ರೆ ಅನ್ನಂಗುಲ್ಲ ಆಡಂಗುಲ್ಲ. ಶಕ್ತಿ ಪ್ರದರ್ಶನ ಮಾಡಕ್ಕೆ ಸಮಾವೇಶ ಮಾಡ್ಕ್ಯಂದು ರೋಡು ತುಂಬಾ ಬ್ಯಾನರ‍್ರು, ಪುಟಗಟ್ಟಲೇ ಜಾಹೀರಾತು ಹಾಕ್ಸಿಕ್ಯಳೋ ರೋಸು ನೋಡಿದರೆ ಉಂಡುದ್ದೆಲ್ಲಾ ಬಾಯಿಗೆ ಬತ್ತದೆ’ ಅಂತ ತಿಪ್ಪಣ್ಣ ಬೇಜಾರಾಗಿದ್ದ.

‘ಹೂ ಕಯ್ಯಾ, ಮೊನ್ನೆ ಯಾರೋ ಬುದ್ಧಿಜೀವಿಗಳು ರಾಜಕಾರಣಿಗಳಿಗೆ ‘ಯಾಕೆ ಹಿಂಗೆ ನೀವು ನೀವೇ ಶಕ್ತಿ–ಬಲಾಬಲ ಅಂತ ಉರಕಂದು ಸಾಯ್ತೀರಿ. ಆಟದ ನಿಯಮ ಅನುಸರಿಸಿಕ್ಯಂದು ಒಂದು ಸಾರ್ವಜನಿಕ ಶಕ್ತಿ ಪ್ರದರ್ಶನದ ಓಪನ್ ಟೂರ್ನಮೆಂಟ್ ಮಡೀಕಳಿ’ ಅಂತ ಉಚಿತ ಸಲಹೆ ಕೊಟ್ಟರಂತಲ್ಲಾ?’ ಅಂತಂದೆ.

‘ದಿಟ ಅಣ್ತಮ್ಮ, ರಾಜಕಾರಣಿಗಳು ಟೇಬಲ್ ಮುಂದೆ ಕೂಕಂದು ಇನ್ನೊಬ್ಬರ ಬಲಗೈ ಹಿಡಕಂದು ಬಗ್ಗಿಸದು. ಯಾರು ಅವರ ಎಡಗಡೆಗೆ ಬೇಗನೆ ಬಗ್ಗಿಸ್ತಾರೋ ಅವರು ನಾಕೌಟಿಗೋಯ್ತರೆ ಅಂತ ತೀರ್ಮಾನಾತು. ನಾಕ್‌ಔಟ್ ಹಂತದಲ್ಲಿ ಮೂರು ಪಕ್ಷದ ಪಂಟ್ರುಗಳಿಗೆ ಆರು ಸೆಮಿ ಫೈನಲ್ಲು, ಒಂದು ಗ್ರಾಂಡ್ ಫಿನಾಲೆ ನಡೀಬೇಕು ಅಂತ ತೀರ್ಮಾನಾತು’.

ADVERTISEMENT

‘ಹಸಿರು ಪಕ್ಷದೋರು, ಬ್ರದರ್, ನಮಗೆ ವಾಕ್‌ಓವರ್ ಕೊಟ್ಟು ಒಂದೇ ಫೈನಲ್ ಮಡಗಿ ಅಂದ್ರಂತೆ’.

‘ನೀವಿರೋರೇ ಮೂರು ಜನ. ಪಕ್ಷದಾಗೆ ಬ್ಯಾರೇರ್ಗೂ ಅವಕಾಶ ಕೊಡ್ರಿ’ ರೆಫ್ರಿ ರಿಜೆಕ್ಟ್ ಮಾಡಿದರು.

ಕಮಲದ ರೆಬೆಲ್ಲುಗಳು, ಟ್ರಬಲ್ಲುಗಳು ‘ನಾವೇ ಕನ್ರಿ ಫೈನಲ್ಲಿಗೆ ಬರೋರು’ ಅಂತಾ ಕೊಚ್ಚಿಗ್ಯತಿದ್ರಂತೆ’ ಅಂತಂದೆ.

‘ನಿನಗೆ ಗೊತ್ತಾ ಅಣ್ತಮ್ಮ? ಹಳೇ ಪಕ್ಷದಲ್ಲಿ ಮಾತ್ರ ಫೈನಲ್ ಯಾಕೆ? ಅವರಿಗೆ ಶಾಸಕರ ಸಪೋಲ್ಟಿಲ್ಲ ಕನ್ರಿ ಅಂದಿದ್ರಲ್ಲ ದೊಡ್ಡ ನಾಯಕರು. ಅಷ್ಟರಲ್ಲಿ ಮೂರೂ ಪಕ್ಷಗಳ ಮಹಿಳೆಯರು, ಈ ಸರ್ತಿ ನಮಗೆ ಮೀಸಲಾತಿ ಬೇಕೇಬೇಕು. ಇಲ್ಲೀಗಂಟಾ ನಿಮ್ಮದೇ ಆಯ್ತು ಅಂತ ಜಗಳ ತೆಗುದ್ರು. ಇದ ಕಂಡು ಹೈಕಮಾಂಡು, ನಾನೇಳಗಂಟಾ ಸುಮ್ಮಗೆ ಕುಕಂದಿರಿ ಅಂದೇಟಿಗೆ ಎಲ್ಲಾ ತೆಪ್ಪಗಾದ್ರು’ ತಿಪ್ಪಣ್ಣ ಶರಾ ಬರೆದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.