ADVERTISEMENT

ಚುರುಮುರಿ | ಟ್ರೋಲ್ ಚಾಲೆಂಜರ್ಸ್!

ತುರುವೇಕೆರೆ ಪ್ರಸಾದ್
Published 29 ಮಾರ್ಚ್ 2025, 0:30 IST
Last Updated 29 ಮಾರ್ಚ್ 2025, 0:30 IST
   

‘ಈಗಿನ ಟ್ರೆಂಡ್ ನೋಡುದ್ರೆ ಈ ಸಾರಿ ನಾನೂರನ್ನೂ ಮೀರಬಹುದು, ಬೇಕಾದ್ರೆ ಬೆಟ್ ಕಟ್ತೀನಿ’ ಎಂದ ಗುದ್ಲಿಂಗ ಹರಟೆಕಟ್ಟೇಲಿ.

‘ಸಾಧ್ಯನೇ ಇಲ್ಲ ಬಿಡು. ಈಗ ಮುನ್ನೂರು ಮಾಡಕ್ಕೇ ಎಲ್ಲಾ ಮುಲುಕಾಡ್ತಿದಾರೆ. ಅಷ್ಟೇ ಅಲ್ಲ, ಚೇಸ್ಮಾಡೋರೇ ಗೆಲ್ಲೋದು’ ಎಂದ ಮಾಲಿಂಗ.

‘ಇಲ್ಲ ಚೇಸ್ ಮಾಡೋರು ಗೆಲ್ಲಲ್ಲ, ಪರ್ಚೇಸ್ ಮಾಡೋರೇ ಗೆಲ್ಲೋದು’.

ADVERTISEMENT

‘ವಿಚಿತ್ರವಾಗಿದ್ಯಲ್ಲ ನಿನ್ ವಾದ! ನಾನೂ ಮಾಲಿಂಗನ ಪರ ಬೆಟ್ ಕಟ್ತೀನಿ. ನಿನ್ ಪ್ರಕಾರ ಯಾವ ಟೀಂ ಅಚೀವ್‍ಮೆಂಟ್ ಇದು’ ಕೇಳಿದ ಕಲ್ಲೇಶಿ.

‘ಟ್ರೋಲ್ ಚಾಲೆಂಜರ್ಸ್’ ಎಂದ ಗುದ್ಲಿಂಗ.

‘ಲೇಯ್... ರಾಯಲ್ ಚಾಲೆಂಜರ್ಸ್ ಸರಿ, ಇದ್ಯಾವುದೋ ಟ್ರೋಲ್ ಚಾಲೆಂಜರ್ಸ್?’

‘ಟವಲ್ ಹಾಕ್ಕಂಡಿರೋ ಹೊಸ ಟೀಂ. ನಾನ್ ಹೇಳಿದ್ದು ರನ್ಸ್ ಅಲ್ಲಲೇ, ವಿಕೆಟ್ಟು’.

‘ವಿಕೆಟ್ಟಾ? ಅಂದ್ರೆ ಟೋಟಲ್ ಉದುರೊ ವಿಕೆಟ್ ಅಂತನಾ?’

‘ಹೌದಲೇ, ಗ್ರೌಂಡ್‍ನಲ್ಲಿ ಡ್ಯೂ ಜಾಸ್ತಿ ಇದೆ. ಎಲ್ಲೆಲ್ಲೋ ತಿರುಗ್ತಿದೆ’.

‘ಅಂದ್ರೆ ಮಳೆ ಹನಿ ಅಂತಾನಾ? ಹಾಗ್ ಯಾವ ಮ್ಯಾಚೂ ನಿಂತಿಲ್ವಲ್ಲ’.

‘ಮಳೆಹನಿ ಅಲ್ಲ, ಜೇನಹನಿ. ಎಲ್ಲಾ ಎಚ್‍ಬಿಡಬ್ಲ್ಯು ಆಗಿ ಔಟ್ ಆಗೋ ತರ ಇದೆ’.

‘ಎಲ್‌ಬಿಡಬ್ಲ್ಯು ಇದೆ, ಇದ್ಯಾವುದೋ ಎಚ್‌ಬಿಡಬ್ಲ್ಯು?’

‘ಹನಿ ಬಿಫೋರ್ ವಿಕೆಟ್!’

‘ಅಂದ್ರೆ, ನೀನು ಇಷ್ಟೊತ್ತೂ ಐಪಿಎಲ್ ಬಗ್ಗೆ ಅಲ್ವಾ ಮಾತಾಡಿದ್ದು?’

‘ಹನಿಟ್ರ್ಯಾಪ್ ವಿಷ್ಯ ಐಪಿಎಲ್‍ಗಿಂತ ಇಂಟ್ರೆಸ್ಟಿಂಗ್. ವಯಸ್ಸಾದ ರಾಜಕಾರಣಿ
ಗಳೆಲ್ಲಾ ಚಿಯರ್ ಬಾಯ್ಸ್ ಆಗಿದಾರೆ. ಲೇಟ್ ಕಟ್ಟು, ಕವರ್ ಡ್ರೈವ್ ಏನ್ ಮಾಡುದ್ರೂ ಡೀಪ್‍ಫೈನ್ ಲೆಗ್ಗಲ್ಲಿ ಕ್ಯಾಚ್ ಹಾಕ್ಕತಿದಾರೆ. ಒಂದು ಕಡೆ ಅಂಪೈರ್ ತಲೆ ಮೇಲೇ ಸಿಕ್ಸರ್ ಎತ್ತುತಾ ಇದಾರೆ. ಇಲ್ ಹಾಕಿದ್ ಬಾಲು ಡೆಲ್ಲಿ ಪಿಚ್ಚಲ್ಲಿ ಹೋಗಿ ಬಿದ್ದಿದೆ. ಇನ್ನೊಂದ್ ಕಡೆ ಬರೀ ವೈಡು, ನೋ ಬಾಲು ಎಸೆದ್ರೂ ವಿಕೆಟ್‍ಗೆ ಎಳ್ಕತಾ ಅವ್ರೆ. ಬೆಟ್ ಕಟ್ಟಕ್ಕೆ ಈ ಗೇಮ್‍ಗಿಂತ ಬೇಕಾ?’

ಎಲ್ಲಾ ಹೌದ್ಹೌದು ಎಂದು ಹಲ್ಕಿರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.