ADVERTISEMENT

ಚುರುಮುರಿ: ಮಾರ್ಜಾಲ ಶುಭವಾಣಿ!

ಸುಮಂಗಲಾ
Published 3 ಏಪ್ರಿಲ್ 2022, 21:04 IST
Last Updated 3 ಏಪ್ರಿಲ್ 2022, 21:04 IST
   

‘ಶುಭಕೃತು ಸಂವತ್ಸರದಾಗೆ ಏನೇನ್ ಹೊಸ ಪ್ಲಾನ್ ಹಾಕೀಯಲೇ?’ ಎಂದು ಬೆಕ್ಕಣ್ಣನಿಗೆ ಕೇಳಿದೆ.‌ ‘ಶುಭಕೃತು ಈಗ ಬಂದಿದ್ದಲ್ಲ... ಇದ್ ಬಂದು ಭಾಳ ವರ್ಸಗಳೇ ಆದುವಲ್ಲ’ ಎನ್ನುತ್ತ ಬೆರಳು ಎಣಿಸತೊಡಗಿತು.

‘ಮಂಗ್ಯಾನಂಥವನೇ... ಪ್ರತಿಯೊಂದು ಸಂವತ್ಸರನೂ ಅರವತ್ ವರ್ಷಕ್ಕೊಂದ್ಸಲ ಬರತೈತಿ, ಪ್ರತಿವರ್ಷ ಬ್ಯಾರೆ ಬ್ಯಾರೆ ಸಂವತ್ಸರ ಇರತಾವು’ ನಾನು ವಿವರಿಸಲು ಪ್ರಯತ್ನಿಸಿದೆ.

ಬೆರಳು ಎಣಿಸಿ ಮುಗಿಸಿದ ಬೆಕ್ಕಣ್ಣ ‘ನಮೋಯುಗ ಶುರುವಾಗಿ ಎಂಟು ವರ್ಸಾತಲ್ಲ, ಆವಾಗಿನಿಂದ ಶುಭಕೃತು ಸಂವತ್ಸರನೇ ಐತಿ. ಸಬ್ಕಾ ವಿಕಾಸ್ ಜೊತಿಗಿ ಸಬ್ಕಾ ಪ್ರಯಾಸ್ ಸೇರಿ ದೇಶ ಎಷ್ಟ್ ಪ್ರಗತಿಯಾಗೈತಿ. ಈಗಂತೂ ಪೆಟ್ರೋಲು, ಡೀಸೆಲು, ಎಲ್‌ಪಿಜಿ, ಎಣ್ಣೆ, ಹಿಂಗ ಎಷ್ಟ್ ಸಾಮಗ್ರಿ ಬೆಲೆ ಗಗನಮುಖಿಯಾಗೈತಿ... ಅಂದ್ರ ಪ್ರಗತಿ ಗ್ರಾಫ್ ಮ್ಯಾಲೆ ಹೋಗಾಕಹತ್ತೈತಿ. ಇದೇ ಎಂಟು ವರ್ಸದಾಗೆ ‘ಅ’ದಿಂದ ‘ಅಂ’ ಅಂತ ಹೊಸಾದೊಂದು ಶ್ರೀಮಂತರ ವರ್ಣಮಾಲೆ ಶುರುವಾಗೇದ. ನಮ್ಮ ಅದಾನಿ, ಅಂಬಾನಿಗಳು ಹಗಲೂರಾತ್ರಿ ದುಡಿದೂ ದುಡಿದೂ ಶತಕೋಟಿಗಟ್ಟಲೆ ರೊಕ್ಕ ಗಳಿಸ್ಯಾರ. ಅವರೆಲ್ಲರಿಗೂ ಶುಭಕೃತು ಬಂದೇ ಭಾಳ ವರ್ಸಾಗೈತಿ. ಶ್ರೀಸಾಮಾನ್ಯರಿಗೆ ಯಾವ ಸಂವತ್ಸರ ಬಂದ್ರೇನಾತು, ಗೋಳು ತಪ್ಪಿದ್ದಲ್ಲ’ ಎಂದು ಅಣಕಿಸಿ ಹೊರಗೋಡಿತು.

ADVERTISEMENT

ಅರ್ಧಗಂಟೆಯಲ್ಲೇ ಪುಟಾಣಿ ಇಲಿಯೊಂದನ್ನು ಹಿಡಿದುಕೊಂಡು ಓಡಿಬಂತು. ‘ಅಲ್ಲೇ ತಿಂದುಬರೂದು ಬಿಟ್ ಇಲ್ಲಿಗ್ಯಾಕೆ ತಂದೀಯಲೇ... ಈಗೇನ್ ಅದನ್ನ ಹಲಾಲ್ ಕಟ್ ಮಾಡತೀಯೋ ಅಥವಾ ಜಟ್ಕಾ ಕಟ್ ಮಾಡಿ ತಿಂತೀಯೋ’ ಬೈಯುತ್ತಲೇ ಕುತೂಹಲದಿಂದ ಕೇಳಿದೆ.

‘ಎರಡೂ ಅಲ್ಲ, ನಾ ಮಾರ್ಜಾಲ ಕಟ್ ಮಾಡತೀನಿ’ ಎನ್ನುವಷ್ಟರಲ್ಲಿ ಬೆಕ್ಕಣ್ಣನಿಂದ ಬಿಡಿಸಿಕೊಂಡ ಇಲಿ ಚಂಗನೆ ಹೊರಗೆ ಜಿಗಿಯಿತು! ಕೋಪ ನೆತ್ತಿಗೇರಿದ ಬೆಕ್ಕಣ್ಣ, ‘ನನ್ ವರ್ಷತೊಡಕು ಊಟಕ್ಕೂ ಕಲ್ಲು ಹಾಕಿದಿ ನೀ. ಎಲ್ಲಾರೂ ಅವರವರ ಪದ್ಧತಿ ಹಂಗ ಕಟ್ ಮಾಡಿ ತಿಂತಾರ. ನೀವು ಮನಷ್ಯಾರು ಜಗಳ, ದ್ವೇಷ ಮಾಡೂದು ಬಿಟ್ಟರೆ ಈ ಸಂವತ್ಸರ ಶುಭವಾಗತೈತಿ’ ಎಂದು ಗುರುಗುಡುತ್ತಲೇ ಕಣಿ ಹೇಳಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.