‘ಏನೋ ತೆಪರ, ನಾಳಿನ ನಿರ್ಮಲಮ್ಮನ ಸೆಂಟ್ರಲ್ ಬಜೆಟ್ಟು ಏನಂತತಿ? ನಮಗೇನರೆ ಅನುಕೂಲ ಅದಾವ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ನಿರ್ಮಲಮ್ಮನ ಬಜೆಟ್ಟು ಬಿಜೆಪಿಯೋರ ಪಾಲಿಗೆ ಸರ್ವಸ್ಪರ್ಶಿ, ಸಮೃದ್ಧ! ಕಾಂಗ್ರೆಸ್‌ನೋರ ಪಾಲಿಗೆ ಖಾಲಿ ಡಬ್ಬಾ ಅಂತತಿ’ ತೆಪರೇಸಿ ನಕ್ಕ.
‘ಆಹಾ... ಬಜೆಟ್‌ಗೂ ಮೊದ್ಲೇ ಭವಿಷ್ಯ ನುಡಿದೆಲ್ಲೋ ತೆಪರ’ ಎಂದ ಗುಡ್ಡೆ.
‘ಮತ್ತಿನ್ನೇನು? ಎಂಥ ದರಿದ್ರ ಬಜೆಟ್ ಆದ್ರೂ ಬಿಜೆಪಿಯೋರು ‘ಆಹಾ ಅದ್ಭುತ’ ಅಂದೇ ಅಂತಾರೆ. ಎಂಥ ಒಳ್ಳೇ ಬಜೆಟ್ ಆದ್ರೂ ಕಾಂಗ್ರೆಸ್‌ನೋರು ‘ಬಜೆಟ್‌ನಲ್ಲಿ ಏನೂ ಇಲ್ಲ, ಖಾಲಿ ಡಬ್ಬಾ’ ಅಂತಾರೆ. ಅದು ಕಾಮನ್’.
‘ಅದಿರ್‍ಲಿ, ಏನೇನು ಸೋವಿ, ಏನೇನು ದುಬಾರಿ ಆಗಬೋದು?’
‘ಮಾಮೂಲಿ... ಸಿಗರೇಟು, ಕಾರು, ಎಲೆಕ್ಟ್ರಾನಿಕ್ ವಸ್ತು ದುಬಾರಿ. ಪಾದರಕ್ಷೆ, ಛತ್ರಿ, ಟವೆಲ್ಲು, ದನ ಕಟ್ಟೋ ಹಗ್ಗ ಸೋವಿ’.
‘ಅದೇನು ಟವೆಲ್ಲು, ಹಗ್ಗ ಸೋವಿ?’
‘ತೆರಿಗೆ ಕಟ್ಟಿ ಕಟ್ಟಿ ಬೆವರು ಒರೆಸಿಕೊಳ್ಳಾಕೆ ಟವೆಲ್ಲು, ಸಾಲ ತೀರಿಸಕಾಗದೇ ಇದ್ರೆ ನೇಣು ಹಾಕ್ಕಳ್ಳಾಕೆ ಹಗ್ಗ’.
‘ಏಯ್, ಅದೇನೋ ಹದಿನೈದು ಲಕ್ಷದವರೆಗೆ ಇನ್‌ಕಂ ಟ್ಯಾಕ್ಸ್ ಇಲ್ಲ ಅಂತಿದ್ರಲ್ಲೋ’ ಮಂಜಮ್ಮ ಕೇಳಿದಳು.
‘ತಗಂಡು ಏನ್ ಮಾಡಾಣ? ನಮಗೆ ಹದಿನೈದು ಲಕ್ಷ ಇನ್‌ಕಂ ಇದ್ರೆ ತಾನೆ? ಎದ್ರೆ ಹೆಗಲ ಮೇಲೆ ಟವೆಲ್ಲು, ಕುಂತ್ರೆ ನಿನ್ ಚಾದಂಗಡಿ ಉದ್ರಿ ಬಾಕಿ’.
‘ಹ್ಞಾ... ಎಲ್ರೂ ಮೊದ್ಲು ನನ್ ಬಾಕಿ ತೀರಿಸ್ರಿ, ಇಲ್ಲಾಂದ್ರೆ ಪಾಪ ಸುತ್ಕೊಳುತ್ತೆ ನೋಡ್ರಿ’ ಮಂಜಮ್ಮ ಗರಂ ಆದಳು.
‘ಪಾಪ ಸುತ್ಕೊಂಡ್ರೆ ಕುಂಭಮೇಳಕ್ಕೋಗಿ ಪುಣ್ಯಸ್ನಾನ ಮಾಡ್ತೀವಿ’ ಗುಡ್ಡೆ ನಕ್ಕ.
‘ಅಲ್ಲಿ ಸ್ನಾನ ಮಾಡಿದ್ರೆ ಪಾಪ ಕಳಿಯುತ್ತೋ ಇಲ್ಲೋ ಗೊತ್ತಿಲ್ಲ, ಆದ್ರೆ ನಿಮ್ಮಂಥ ಕೊಳಕರು ಅಲ್ಲಿ ಹೋಗಿ ಸ್ನಾನ ಮಾಡೋದ್ರಿಂದ ನದಿಗಳೆಲ್ಲ ಗಬ್ಬು ನಾರೋದಂತೂ ಗ್ಯಾರಂಟಿ’ ಎಂದಳು ಮಂಜಮ್ಮ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.