ADVERTISEMENT

ಚುರುಮುರಿ: ಕೌಟುಂಬಿಕ ಕಲಾಪ

ಎಸ್.ಬಿ.ರಂಗನಾಥ್
Published 19 ಜನವರಿ 2022, 18:30 IST
Last Updated 19 ಜನವರಿ 2022, 18:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಯಾಕೆ ಸಪ್ಪಗಿದೀಯೋ, ಸಂಕ್ರಾಂತಿ ಸಂಭ್ರಮದ ಹ್ಯಾಂಗೋವರ್ ಇನ್ನೂ ಕ್ಲಿಯರ್ ಆಗಿಲ್ವೇನಯ್ಯಾ?’, ಚಡ್ಡಿ ದೋಸ್ತನನ್ನ ಕೇಳಿದೆ.

‘ಏನು ಸಂಭ್ರಮಾನೋ, ಈ ಕೊರೊನಾ ಕಾಲ್ದಲ್ಲಿ! ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ... ಅಲ್ದೆ, ಮನೇಲಿ ಅಡಕತ್ತರೀಲಿ ಸಿಕ್ಕೊಂಡಿದೀನಿ’ ಎಂದ.

‘ಮತ್ತೆ ಅತ್ತೆ ಸೊಸೆಯರ ಜಗಳವೇನೋ?’

ADVERTISEMENT

‘ಹೌದಯ್ಯಾ, ಇಬ್ಬರೂ ಕೋರ್ಟ್ ಜಡ್ಜ್‌ಮೆಂಟ್‌ಗಳನ್ನ ಕೋಟ್ ಮಾಡ್ತಾರೆ!’

‘ಏನಂತಾ?’

‘ಹೆಂಡತಿ ಫೋನಲ್ಲಿ ಅತ್ತೆಗೆ ಬೈದಿರೋದನ್ನ, ಆಕೆಗೆ ಗೊತ್ತಾಗ್ದಂತೆ ನಾನು ರೆಕಾರ್ಡ್ ಮಾಡ್ಕೊಂಡಿರೋದು ಪಂಜಾಬ್– ಹರಿಯಾಣ ಹೈಕೋರ್ಟ್ ಪ್ರಕಾರ ಅಪರಾಧ ಅಂತಾಳೆ!’

‘ಆ ತೀರ್ಪನ್ನ ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿದಾರಲ್ಲ... ಆ ಅಪರಾಧಕ್ಕೆ ಶಿಕ್ಷೆ ಏನು ಕೊಡ್ತಾರಂತೆ ನಿನ್ನ ಶ್ರೀಮತಿ?’

‘ಅಮ್ಮ ತನ್ಹತ್ರ ಇಟ್ಕೊಂಡಿರೋ ಆಕೆ ಒಡವೆಗಳನ್ನ ವಾಪಸ್ ಕೊಡಿಸ್ಬೇಕಂತೆ...’

‘ಅಮ್ಮ ಏನಂದ್ರು?’

‘ಪಂಜಾಬ್ ಮಹಿಳೆಯೊಬ್ಬರ ಇಂಥ ದೂರಿನ ಬಗ್ಗೆ, ಸುಪ್ರೀಂ ಕೋರ್ಟ್ ‘ಇದು ತಪ್ಪಲ್ಲ’ ಎಂದಿದೆ, ಈ ತೀರ್ಪು ಕೊಟ್ಟಿರೋ ಇಬ್ಬರಲ್ಲಿ ಒಬ್ರು ಮಹಿಳಾ ನ್ಯಾಯಮೂರ್ತಿ ಅಂತ ಪೇಪರ್ ತೋರಿಸಿದ್ರು!’

‘ಅದಕ್ಕೆ ನಿನ್ನ ‌ಹೆಂಡ್ತಿ ಏನಂತಾರೋ?’

‘ನಾನು ವರದಕ್ಷಿಣೆ ಕಿರುಕುಳಾಂತ ದೂರು ಕೊಡ್ತೀನಿ. ಸುಪ್ರೀಂ ಕೋರ್ಟ್ ಇದು ಶಿಕ್ಷಾರ್ಹ ಅಪರಾಧಾಂತ ಮೊನ್ನೆ ತಮಿಳುನಾಡು ಪ್ರಕರಣವೊಂದರಲ್ಲಿ ಹೇಳಿದೆಯಲ್ಲಾ. ಆ ಜಡ್ಜ್‌ಮೆಂಟ್ ಕೊಟ್ಟೋರಲ್ಲಿ ಒಬ್ರು ಕರ್ನಾಟಕದ ಮಹಿಳಾ ನ್ಯಾಯಮೂರ್ತಿಗಳು ಅಂತಾಳೆ’.

‘ಹೌದು ಕಣಯ್ಯ, ಆ ಕೇಸಿನಲ್ಲಿ ಅತ್ತೆಗೆ ಒಂದು ವರ್ಷ ಜೈಲು ಶಿಕ್ಷೆ ಆಗಿದೆ’.

‘ದಯವಿಟ್ಟು ನೀನು ನಮ್ಮ ಮನೆಗೆ ಬಂದು, ಫ್ಯಾಮಿಲಿ ಕೋರ್ಟ್ ನ್ಯಾಯಾಧೀಶನಾಗಿ ತೀರ್ಪಿತ್ತು ನನ್ನನ್ನು ಪಾರುಮಾಡ್ತೀಯಾ, ಪ್ಲೀಸ್’.

‘ಅದಕ್ಕೆ ಫೀಸು ಕೊಡ್ಬೇಕಾಗುತ್ತೆ’.

‘ಆಗ್ಲಯ್ಯಾ, ನೀನೇನು ದುಬಾರಿ ಗುಂಡು ಪಾರ್ಟಿಯಲ್ವಲ್ಲಾ, ಟೀಟೋಟಲರ್!’ ಎನ್ನುತ್ತಾ ಮಿತ್ರ ಹೆಗಲ ಮೇಲೆ ಕೈಹಾಕಿ ಕರೆದೊಯ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.