ADVERTISEMENT

ಚುರುಮುರಿ: ಫಟಾಫಟ್ ಗಣತಿ!

ಬಿ.ಎನ್.ಮಲ್ಲೇಶ್
Published 12 ಜೂನ್ 2025, 23:21 IST
Last Updated 12 ಜೂನ್ 2025, 23:21 IST
ಚುರುಮುರಿ
ಚುರುಮುರಿ   

‘ಬ್ರೇಕಿಂಗ್ ನ್ಯೂಸ್! ಭಾರತದಲ್ಲಿ ಬಡವರ ಸಂಖ್ಯೆ ಕಡಿಮಿ ಆಗೇತಂತೆ, ಪೇಪರಲ್ಲಿ ಬಂದಿದೆ’ ಎಂದ ದುಬ್ಬೀರ.

‘ಹೌದಾ? ಮತ್ತೆ ಈ ಮಂಜಮ್ಮ ಇನ್ನೂ ಡಬ್ಬಾ ಹೋಟ್ಲಲ್ಲೇ ಅದಾಳೆ?’ ಗುಡ್ಡೆ ನಕ್ಕ.

‘ನಿನ್ನಂಥ ಉದ್ರಿ ಗಿರಾಕಿಗಳಿರೋವಾಗ ನಾನು ಉದ್ಧಾರ ಆಗೋಕಾಗುತ್ತಾ?’ ಮಂಜಮ್ಮಗೆ ಸಿಟ್ಟು ಬಂತು.

ADVERTISEMENT

‘ಶಾಂತಿ, ಶಾಂತಿ... ಬಿಗ್ ನ್ಯೂಸ್ ಏನ್ ಗೊತ್ತಾ? ಭಾರತದ ಜನಸಂಖ್ಯೆ ಈಗ 146 ಕೋಟಿಯಂತೆ. ಜಗತ್ತಲ್ಲಿ ನಾವೇ ನಂಬರ್ ಒನ್!’ ಎಂದ ತೆಪರೇಸಿ.

‘ಇದೊಂದ್ರಲ್ಲೇ ನಾವು ಜಗತ್ತನ್ನ ಮೀರಿಸಿರೋದು. ಅದಿರ್ಲಿ, ಕರ್ನಾಟಕದ ಜನಸಂಖ್ಯೆ ಎಷ್ಟಿರಬೋದು?’ ದುಬ್ಬೀರ
ಕೇಳಿದ.

‘ಏಳೋ, ಎಂಟೋ ಕೋಟಿ ಇರಬೋದು...’

‘ಮತ್ತೆ ಅಷ್ಟು ಕೋಟಿ ಜನಾನ ತೊಂಬತ್ತು ದಿನದಲ್ಲಿ ಭೇಟಿಯಾಗಿ ಜಾತಿ ಜನಗಣತಿ ಮಾಡಾಕಾಗುತ್ತಾ?’ ಕೊಟ್ರೇಶಿ ಕೊಕ್ಕೆ.

‘ನೋಟು ಎಣಿಸೋ ಮಿಷನ್ ಥರ ಜನ ಎಣಿಸೋ ಮಿಷನ್ ಇದ್ದಿದ್ರೆ ಮಾಡಬೋದಿತ್ತೇ ನಪ...’ ಮಂಜಮ್ಮ ನಕ್ಕಳು.

‘ನಿನ್ತೆಲಿ, ಮನಸ್ಸು ಮಾಡಿದ್ರೆ ತೊಂಬತ್ತು ದಿನ ಯಾಕೆ, ಒಂಬತ್ತು ದಿನದಲ್ಲೇ ಫಟಾಫಟ್ ಅಂತ ಜಾತಿ ಜನಗಣತಿ ಮಾಡಿ ಮುಗಿಸ್ಬೋದು...’ ಗುಡ್ಡೆ ಆಕಾಶ ನೋಡಿದ.

‘ಒಂಬತ್ತು ದಿನದಲ್ಲಾ? ಹೆಂಗೆ?’

‘ಸಿಂಪಲ್... ಆಯಾ ಜಾತಿ ಮುಖಂಡರನ್ನ ಕರೆಸಿ ನಿಮ್ ಜಾತಿ ಜನ ಎಷ್ಟದಾರೆ ನೀವೇ ಲೆಕ್ಕ ಕೊಡಿ ಅಂದ್ರೆ ಮುಗೀತು. ಹೆಚ್ಚು, ಕಮ್ಮಿ ಅನ್ನೋ ಯಾವ ಆಕ್ಷೇಪಣೆನೂ ಬರಲ್ಲ...’

‘ಅವರು ಒಂದಕ್ಕೆರಡು ಲೆಕ್ಕ ಕೊಡ್ತಾರೆ, ಆಗ? ಜನಸಂಖ್ಯೆ 15 ಕೋಟಿ ಆದ್ರೆ?’

‘ಆಗ್ಲಿಬಿಡು, 146 ಕೋಟಿಗೆ ಇದ್ನೂ ಸೇರಿಸಿದ್ರಾತು...’

‘ಹಂಗಾದ್ರೆ ಜನಸಂಖ್ಯೆಯ ಸ್ತುತಿಗೀತೆಯೊಂದನ್ನು ರಚಿಸಿಕೊಳ್ಳೋಣ...’

‘ಅದನ್ನು ಹೀಗೆ ಹಾಡಬಹುದಲ್ಲವೇ... ಜನವೇ ಜನವೇ ಜನವೇ... ಎಲ್ಲೆಲ್ಲೂ ಜನ ಜನವೇ!’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.