ADVERTISEMENT

ಚುರುಮುರಿ: ಗೋಡಂಬಿ ಗಿಮಿಕ್ಕು!

ಬಿ.ಎನ್.ಮಲ್ಲೇಶ್
Published 2 ಡಿಸೆಂಬರ್ 2021, 19:31 IST
Last Updated 2 ಡಿಸೆಂಬರ್ 2021, 19:31 IST
ಚುರುಮುರಿ
ಚುರುಮುರಿ   

‘ರೀ... ಪೇಪರ್ ನೋಡಿದ್ರಾ? ಗೋಡಂಬಿ 30 ರೂಪಾಯಿಗೆ ಕೆ.ಜಿ, ಗಸಗಸೆ 20 ರೂಪಾಯಿಗೆ ಕೆ.ಜಿ.ಯಂತೆ. ಯಾರಿಗಾದ್ರು ಹೇಳಿ ನಮಗೂ ಎರಡೆರಡು ಕೆ.ಜಿ. ತರಿಸಿರೀ...’ ಮಡದಿ ನ್ಯೂಸ್ ಪೇಪರ್ ತಂದು ತೋರಿಸಿದಾಗ ನನಗೆ ನಗು ಬಂತು. ‘ಆತು, ಆದ್ರೆ ಅವರು ತೊಗರಿಬೇಳೆ, ಕೊತ್ತಮರಿ ಸೊಪ್ಪು ತಗಂಡ್ರೆ ಮಾತ್ರ ಗೋಡಂಬಿ, ಗಸಗಸೆ ಕೊಡ್ತಾರಂತೆ’ ಎಂದೆ.

‘ಹೌದಾ? ಅವನ್ನೂ ತಗಂಡ್ರಾತು, ಏನೀಗ?’

‘ಏನಿಲ್ಲ, ತೊಗರಿಬೇಳೆ ಕೆ.ಜಿ.ಗೆ 500 ರೂಪಾಯಿ, ಕೊತ್ತಮರಿ ಸೊಪ್ಪು ಕಟ್ಟಿಗೆ 200 ರೂಪಾಯಿಯಂತೆ...’

ADVERTISEMENT

‘ಹೇ ಹೋಗ್ರಿ, ಹತ್ತು ರೂಪಾಯಿ ಕೊತ್ತಮರಿಗೆ ಯಾರಾದ್ರು 200 ರೂಪಾಯಿ ಕೊಡ್ತಾರಾ?’

‘ಅದೇ ಮತ್ತೆ... ಕೆ.ಜಿ.ಗೆ ಎರಡು ಸಾವಿರ ರೂಪಾಯಿ ಇರೋ ಗಸಗಸೆನ ಯಾರಾದ್ರು 20 ರೂಪಾಯಿಗೆ ಕೊಡ್ತಾರಾ?’

‘ಮತ್ತೆ ಪೇಪರ್‌ನಲ್ಲಿ ಬಂದಿರೋದು ಸುಳ್ಳಾ?’

ಸುಳ್ಳಲ್ಲ, ನಿಜನೇ... ಅದು ಹಾಸ್ಟೆಲ್ ಟೆಂಡರ್‌ನೋರ ಗಿಮಿಕ್ಕು. ಗಸಗಸೆ, ಗೋಡಂಬಿ ತೋರಿಸಿ ಕೋಟಿಗಟ್ಲೆ ಟೆಂಡರ್ ಹೊಡ್ಕಂತಾರೆ. ಆಮೇಲೆ ಗೋಡಂಬಿನೂ ಇಲ್ಲ, ಗಸಗಸೆನೂ ಇಲ್ಲ. ಎಲ್ಲ ಅಡ್ಜಸ್ಟ್‌ಮೆಂಟು...’

‘ಹೌದಾ? ಇದೆಲ್ಲ ನಿಮಗೆ ಹೆಂಗೊತ್ತು?’

‘ನೋಡೇ, ಯಾವುದನ್ನೇ ಆಗಲಿ ಕಡಿಮೆ ರೇಟಿಗೆ ಕೊಡೋರು, ಜಾಸ್ತಿ ಪ್ರಚಾರ ಮಾಡೋರು, ಒಂದಕ್ಕೊಂದು ಫ್ರೀ ಕೊಡೋರು ಎಲ್ಲ ಮೋಸನೇ...’

‘ಹೌದಾ ಅದೆಂಗೇಳ್ತೀರಾ?’

‘ಇಲ್ಲಿ ಮೋಸ ಹೋಗಿರೋನು ನಾನೇ ಇಲ್ವ? ನಿಮ್ಮಪ್ಪ ಭಾರೀ ಶ್ರೀಮಂತ ಅದೂ ಇದೂ ಅಂತ ಬಿಲ್ಡಪ್ ನೋಡಿ ನಿನ್ನ ಮದುವೆಯಾದೆ. ಆಮೇಲೆ ಸಿಕ್ಕಿದ್ದೆಲ್ಲ ಒಣ ಗಣೇಶ...’

‘ಏನು? ಒಣ ಗಣೇಶನಾ? ನಿಮ್ಮ ಮುಖಕ್ಕೆ...’

ಮಡದಿ ಕೋಪ ತಾರಕಕ್ಕೇರುವ ಮೊದಲೇ ಅಲ್ಲಿಂದ ಜಾಗ ಖಾಲಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.