ಸುಮಂಗಲಾ
ಬೆಕ್ಕಣ್ಣ ಬಿಟ್ಟೂಬಿಡದಂತೆ ಯೂಟ್ಯೂಬಿನಲ್ಲಿ ಅದೇನೋ ವಿಡಿಯೊ ನೋಡುತ್ತಿತ್ತು. ಊಟಕ್ಕೆ ಉಪ್ಪಿನಕಾಯಿ ನೆಕ್ಕಿಕೊಳ್ಳುವಂತೆ ಮತ್ತೆ ಆಗೀಗ ಸುದ್ದಿಯನ್ನು, ಸುದ್ದಿಯೊಳಗಣ ಫೋಟೊಗಳನ್ನು ನೋಡುತ್ತಿತ್ತು.
‘ಅನಂತಕಲ್ಯಾಣವಿದು… ಧರೆಗಿಳಿದ ಸ್ವರ್ಗವಿದು’ ಎಂದು ‘ವಿವಾಹ ಭೋಜನ’ವಿದು ಧಾಟಿಯಲ್ಲಿ ಹಾಡಿತು.
‘ಬಾಲಿವುಡ್ಡಿನಿಂದ ಹಾಲಿವುಡ್ಡಿನವರೆಗೆ ನೂರಾರು ಸಿನಿಮಾ ತಾರೆಯರು ಬಂದಿದ್ದರು ಅಂದ್ರೆ ಸ್ವರ್ಗ ಅಲ್ಲ, ತಾರಾಗಣವೇ ಇಳಿದೈತಿ ಬಿಡು’ ಎಂದೆ.
‘ಮೂರು ದಿನದ ಮದುವಿ ಅಂದ್ರೆ ಎಷ್ಟರ ತಯಾರಿ ಮಾಡಿರಬೌದು!’ ಬೆಕ್ಕಣ್ಣ ಉದ್ಗರಿಸಿತು.
‘ಮೂರು ದಿನ ಅಲ್ಲಲೇ… ಏಳು ತಿಂಗಳ ಮದುವಿ ಕಾರ್ಯಕ್ರಮ! ಹೋದ ಡಿಸೆಂಬರಿನಾಗೆ ನಿಶ್ಚಿತಾರ್ಥ, ಜನವರಿನಾಗೆ ನಿಶ್ಚಿತಾರ್ಥದ ಪಾರ್ಟಿ, ಮಾರ್ಚಿವಳಗೆ ಜಾಮ್‌ನಗರದಾಗೆ ಪ್ರಿವೆಡ್ಡಿಂಗ್ ಕಾರ್ಯಕ್ರಮ, ಜುಲೈ 8ಕ್ಕೆ ಅರಿಸಿನ ಹಚ್ಚೂ ಕಾರ್ಯಕ್ರಮ, ಮೊನ್ನೆ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನದ ಮದುವೆ ಕಾರ್ಯಕ್ರಮ…’ ಎಂದು ಹೇಳಿದೆ.
‘ಅಲ್ಲಲೇ… ಅಂವಾ ಅಗದಿ ಭಯಂಕರ ಶ್ರೀಮಂತನಿದ್ದಾನಂತ ಇಡೀ ಜಗತ್ತಿಗೆ ಗೊತ್ತೈತಿ… ಈ ಅಂದಾದುಂದಿ ಮದುವೆ ಮೂಲಕ ಮತ್ತೆ ಢಣಾಢಂಗೂರ ಮಾಡಬೇಕೇನು?’ಎಂದೆ.
‘ಗೊತೈತಿಲ್ಲೋ… ನಮ್ ದೇಶದಾಗೆ ಬಡವರು, ಮದ್ಯಮವರ್ಗದವರು, ತಮ್ಮ ಆಸ್ತಿಯ ಐದರಿಂದ ಹದಿನೈದು ಪರ್ಸೆಂಟ್ ರೊಕ್ಕ ಮಕ್ಕಳ ಮದುವಿಗೆ ಖರ್ಚು ಮಾಡತಾರಂತೆ. ಅಂಬಾನಿ ಐದು ಸಾವಿರ ಕೋಟಿ ಖರ್ಚು ಮಾಡ್ಯಾನೆ ಅಂದ್ರೂ ಅವನ ಒಟ್ಟು ಆಸ್ತಿವಳಗೆ ಬರೇ ಅರ್ಧ ಪರ್ಸೆಂಟ್ ಖರ್ಚು ಮಾಡಿದಂತೆ! ಅದ್ರಿಂದ ಎಷ್ಟ್ ಮಂದಿಗೆ ಕೆಲಸ ಸಿಗತೈತಿ… ಈ ನೆವದಾಗಾರೂ ರೊಕ್ಕ ಖರ್ಚುಮಾಡಲೇಳು’ ಎಂದಿತು ಬೆಕ್ಕಣ್ಣ.
‘ಅಷ್ಟ್ ರೊಕ್ಕದಾಗೆ ಬಡವರಿಗೆ ಎಷ್ಟೆಲ್ಲ ಕಲ್ಯಾಣ ಕಾರ್ಯಕ್ರಮ ಮಾಡಬೌದಿತ್ತು’
‘ಅದನ್ನೂ ಮಾಡ್ಯಾರೆ! ಅನಂತಕಲ್ಯಾಣಕ್ಕಿಂತ ಮುಂಚೆ ಪಾಲ್ಗರ್‌ನಲ್ಲಿ ಬಡಕುಟುಂಬಗಳ 50 ಜೋಡಿಗೆ ಸಾಮೂಹಿಕ ವಿವಾಹ ಅಂದರೆ ಕಲ್ಯಾಣ ಕಾರ್ಯಕ್ರಮ ಮಾಡ್ಯಾರೆ’ ಬೆಕ್ಕಣ್ಣ ಮುಸಿಮುಸಿ ನಕ್ಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.