ADVERTISEMENT

ಚುರುಮುರಿ: ತಮ್ಮಣ್ಣನ ಜಿಎಸ್‍ಟಿ

ಮಣ್ಣೆ ರಾಜು
Published 20 ಜುಲೈ 2022, 19:00 IST
Last Updated 20 ಜುಲೈ 2022, 19:00 IST
   

ತರಕಾರಿ ಗಾಡಿ ತಳ್ಳಿಕೊಂಡು ತಮ್ಮಣ್ಣ ಬಂದ. ‘ಯಾಕೆ ತಮ್ಮಣ್ಣ ಇವತ್ತು ಲೇಟು?’ ಸುಮಿ ಕೇಳಿದಳು.

‘ಹೆಂಡ್ತಿ ಜೊತೆ ಮೀಟಿಂಗ್ ಇತ್ತು, ಅದಕ್ಕೆ ತಡ ಆಯ್ತು’ ಅಂದ.

ಅಕ್ಕಪಕ್ಕದ ಮನೆಯ ಪದ್ಮಾ, ಪಂಕಜ ತರಕಾರಿ ಕೊಳ್ಳಲು ಬಂದರು.

ADVERTISEMENT

‘ಇನ್ಮೇಲೆ ತರಕಾರಿಯನ್ನು ಕೊಸರು ಕೇಳಬೇಡಿ, ಚೌಕಾಶಿ ಮಾಡಬೇಡಿ, ಫಿಕ್ಸೆಡ್ ರೇಟ್...’ ತಮ್ಮಣ್ಣ ನಿಷ್ಠುರವಾಗಿ ಹೇಳಿದ.

‘ಚೌಕಾಶಿ ಮಾಡದೆ ತರಕಾರಿ ಖರೀದಿಸಿದರೆ ಸಾಂಬಾರ್ ರುಚಿ ಇರುವುದಿಲ್ಲ’ ಅಂದಳು ಪದ್ಮಾ.

‘ಯಾವುದೇ ತರಕಾರಿ ಕೊಂಡರೂ ಮಾರ್ಕೆಟ್ ರೇಟ್ ಮೇಲೆ 5 ಪರ್ಸೆಂಟ್ ಜಿಎಸ್‍ಟಿ ಕೊಡಬೇಕು’.

‘ತಳ್ಳೋ ಗಾಡಿಯ ತರಕಾರಿಗೂ ಜಿಎಸ್‍ಟಿ ಕೊಡಬೇಕಾ?!...’ ಪಂಕಜ ಆಕ್ಷೇಪಿಸಿದಳು.

‘ನಾವು ರೆಗ್ಯುಲರ್‍ರಾಗಿ ನಿಮ್ಮ ಹತ್ರನೇ ತರಕಾರಿ ಕೊಳ್ತೀವಿ, ನಮಗೆ ರಿಯಾಯಿತಿ ಇಲ್ವಾ?’ ಸುಮಿ ಕೇಳಿದಳು.

‘ಇದೆ, ಫ್ರೆಶ್ ತರಕಾರಿಗೆ 5 ಪರ್ಸೆಂಟ್ ಜಿಎಸ್‍ಟಿ ಕೊಡಿ, ಓಲ್ಡ್ ಸ್ಟಾಕ್ ತರಕಾರಿಗೆ ಜಿಎಸ್‍ಟಿ ವಿನಾಯಿತಿ ಕೊಡ್ತೀನಿ’ ಅಂದ.

‘ಸರಿ, ಜಿಎಸ್‍ಟಿ ಅಂದರೆ ಏನು ಅಂತ ಅಂದುಕೊಂಡಿದ್ದೀರಿ?’ ಕೇಳಿದಳು ಪಂಕಜ.

‘ಜಿಎಸ್‍ಟಿ ಅಂದ್ರೆ ಗಾಡಿ ಸೇವಾ ತೆರಿಗೆ. ಗಾಡಿ ತಳ್ಳಿಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದು ತರಕಾರಿ ಸೇವೆ ಕೊಡುತ್ತಿದ್ದೇನಲ್ಲ, ಅದರ ತೆರಿಗೆ ಕೊಡಬೇಕು’.

‘ಜಿಎಸ್‍ಟಿ ವಿಧಿಸಬೇಕು ಅಂತ ನಿಮಗೆ ಯಾವ ಸರ್ಕಾರ ಆದೇಶ ಮಾಡಿದೆ?’ ಪದ್ಮಾ ಕೇಳಿದಳು.

‘ನನ್ನ ಹೆಂಡ್ತಿಯ ಆದೇಶ ಮೇಡಂ. ನಾನು ತರಕಾರಿ ಗಾಡಿ ತಳ್ಳುತ್ತೇನೆ, ಅವಳು ಸಂಸಾರ ತಳ್ಳುತ್ತಾಳೆ. ಈ ತಳ್ಳಾಟದ ತಾಪತ್ರಯ ನಿವಾರಣೆಗೆ ಹೆಂಡತಿ ಜಿಎಸ್‍ಟಿ ಜಾರಿ ಮಾಡಿದ್ದಾಳೆ. ಸರ್ಕಾರ ನಡೆಸುವುದಕ್ಕಿಂತ ಸಂಸಾರ ನಡೆಸೋದು ಕಷ್ಟ ಅಂತ ನಿಮಗೂ ಗೊತ್ತಲ್ವೇ?’ ಅಂದ ತಮ್ಮಣ್ಣ.

ಹೆಂಗಸರು ಮರುಮಾತನಾಡದೆ ತರಕಾರಿ ಆರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.