ADVERTISEMENT

ಚುರುಮುರಿ | ಸೂಕ್ತ ಸಮಯ!

ಬಿ.ಎನ್.ಮಲ್ಲೇಶ್
Published 28 ಮಾರ್ಚ್ 2025, 0:30 IST
Last Updated 28 ಮಾರ್ಚ್ 2025, 0:30 IST
   

‘ಲೇ ತೆಪರ, ಏನಲೆ ಇದೂ... ಎರಡೂ ಪಕ್ಷಗಳ ಫೈರ್‌ಬ್ರ್ಯಾಂಡ್‌ಗಳು ಹಿಂಗೆ ಢಮಾರ್ ಆದ್ವಲ್ಲೋ? ಸಿಕ್ಸರ್ ಬಾರಿಸ್ತಾರೆ ಅಂದ್ರೆ ಹಿಟ್ ವಿಕೆಟ್‌ ಆಗೋದ್ರಲ್ಲೋ’ ಹರಟೆಕಟ್ಟೆಯಲ್ಲಿ ದುಬ್ಬೀರ ಬೇಸರ ವ್ಯಕ್ತಪಡಿಸಿದ.

‘ನಮ್ ವಿಜಾಪುರದ ಹುಲಿ ಢಮಾರೇನಾಗಿಲ್ಲ. ಇನ್ನೂ ರೊಚ್ಚಿಗೇಳ್ತತಿ ನೋಡ್ತಿರು’ ಎಂದಳು ಮಂಜಮ್ಮ.

‘ನಮ್ ಹನಿಟ್ರ್ಯಾಪ್ ಫೈರ್‌ಬ್ರ್ಯಾಂಡ್ ಹುಲಿನೂ ಅಷ್ಟೇ, ಸೂಕ್ತ ಸಮಯಕ್ಕಾಗಿ ಕಾಯ್ತಾ ಐತಿ’ ಎಂದ ಗುಡ್ಡೆ.

ADVERTISEMENT

‘ಅಲ್ಲ, ಈ ಸೂಕ್ತ ಸಮಯ ಅಂದ್ರೇನು?’ ಕೊಟ್ರೇಶಿ ಕೊಕ್ಕೆ.

‘ಅಂದ್ರೇ, ಹೇಳೋದಿಕ್ಕೂ ಕೇಳೋದಿಕ್ಕೂ ಇದು ಸಮಯ ಅಲ್ಲ ಅಂತ’ ತೆಪರೇಸಿ ನಕ್ಕ.

‘ಈ ಹನಿಟ್ರ್ಯಾಪ್ ವಿಚಾರದಲ್ಲಿ ನಮ್ ಸಿಎಂ ಸಾಹೇಬ್ರು ಪಿಟಿಕ್ ಅಂದಿಲ್ಲ ಯಾಕೆ?’

‘ಅವರಿಗಿನ್ನೂ ಸೂಕ್ತ ಸಮಯ ಬಂದಿಲ್ಲ ಅಂತ ಕಾಣ್ಸುತ್ತೆ’.

‘ಅಲ್ಲಿ ಡೆಲ್ಲೀಲಿ ಕುಮಾರಣ್ಣ, ಜಾರಕಿಹೊಳಿ ಸಾಹೇಬ್ರು ಭೇಟಿ ಆಗಿದಾರೆ?’

‘ಅವರಿಗೆ ಸೂಕ್ತ ಸಮಯ ಬಂದಿದೆ ಅನ್ಸುತ್ತೆ’.

‘ಹೋಗ್ಲಿ ಹಬ್ಬ ಜೋರಾ? ನಮ್ ‘ನಮೋ’ ಸಾಹೇಬ್ರು ಏನೋ ಕಿಟ್ ಕೊಡ್ತದಾರಂತೆ?’

‘ಅವರು ಸೂಕ್ತ ಸಮಯ ಸರಿಯಾಗಿ ಬಳಕೆ ಮಾಡ್ಕೋತಿದಾರೆ’.

‘ಲೇಯ್, ಎಲ್ಲಕ್ಕೂ ಅದ್ನೇ ಹೇಳ್ತಿಯಲ್ಲಲೆ. ಹಬ್ಬಕ್ಕೆ ಊರಿಗೋಗೋರಿಗೆ ಬಸ್‌ಚಾರ್ಜು ಸಿಕ್ಕಾಪಟ್ಟಿ ಏರ್ಸಿದಾರಂತೆ, ನಿಮ್ ರಾಜಕಾರಣಿಗಳಿಗೆ ಹೇಳಿ ಒಂದೆರಡು ರೈಲು ಬಿಡ್ಸೋದಲ್ವಾ?’ ಕೊಟ್ರೇಶಿ ಗರಂ ಆದ.

‘ಅದಕ್ಕೆ ಸೂಕ್ತ ಸಮಯ ಏನೂ ಬ್ಯಾಡ, ನಮ್ ರಾಜಕಾರಣಿಗಳು ಎಲ್ಲ ಟೈಮಲ್ಲೂ ರೈಲು ಬಿಡ್ತಾನೇ ಅದಾರೆ’ ಗುಡ್ಡೆ ನಕ್ಕ.

‘ಲೇ ಗುಡ್ಡೆ, ನಮ್ ಪಕ್ಷದೋರ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ನೋಡು, ಮೊದ್ಲು ನನ್ ಹೋಟ್ಲು ಬಾಕಿ ತೀರ್ಸು’ ಮಂಜಮ್ಮಗೂ ಸಿಟ್ಟು ಬಂತು.

‘ನಿನ್ ಜುಜುಬಿ ಚಾ ಬಾಕಿ ತಾನೆ? ಸೂಕ್ತ ಸಮಯ ಬಂದಾಗ ತೀರಿಸ್ತೀನಿ ಬಿಡು’ ಎಂದ ಗುಡ್ಡೆ.

ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.