ADVERTISEMENT

ಚುರುಮುರಿ | ಜಲಗಂಡರು

ಲಿಂಗರಾಜು ಡಿ.ಎಸ್
Published 22 ನವೆಂಬರ್ 2021, 20:15 IST
Last Updated 22 ನವೆಂಬರ್ 2021, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಸೋರುತಿಹುದು ಮನೆಯ ಮಾಳಿಗಿ’ ಅಂತ ಮನೆ ಮುಂದೆ ಕುತುಗಂಡು ತುರೇಮಣೆ ಬುಸುಗ
ರೀತಿದ್ರು. ‘ಇದ್ಯಾಕ್ಸಾ, ಸರೀಫ್‌ ಸಾಯಬ್ರನ್ನ ನೆನೆಸಿಕ್ಯಂಡು ಪಿಟೀಲು ಕುಯ್ಯತಿದೀರಾ? ಏನು ನಿಮ್ಮ ಸಮಸ್ಯೆ?’ ಅಂದು ವಿಚಾರಿಸಿದೆ.

‘ವೋಗೀ ಬಂದು ಯೋಗಿ ಹೆಗಲ ಮ್ಯಾಲೆ ಕೈ ಹಾಕಿದಂಗೆ ಮಳೆ ವಾರದಿಂದ್ಲೂ ಬುಟ್ಟೂಬುಡದೇ ಸುರಿದು ಮನೆ ಲೀಕ್ ಆಯ್ತಾದೆ ಕನೋ. ‘ನಿನ್ನ ಅಜ್ಞಾನದಿಂದಲೇ ಸೋರ್ತಿರದು’ ಅಂತ ಯೆಂಡ್ರು ಬೋದಳು’ ಅಂತ ತಣ್ಣೀರು ಸುರಿಸಿದರು.

‘ಅದು ಬುಟ್ಟಾಕಿ ಸಾ, ಈಗ ಸಾಹಿತ್ಯ ಪರಿಷತ್ ಚುನಾವಣೆ ಮುಗಿದು ಹೊಸಾ ಪಂಟ್ರುಗಳು ಬಂದವ್ರೆ. ಈಗ್ಲಾದ್ರೂ ಕನ್ನಡ ಉದ್ಧಾರಾದದ ಅಂತ!’

ADVERTISEMENT

‘ಪರ್ಸೆಂಟೇಜ್ ಗಿರಾಕಿಗಳು ಪರಿಷತ್ತಲ್ಲೂ ಜಾಸ್ತಿಯಾದ್ರೆ ಅದೂ ಲೀಕಾಗದೇಯ!’

‘ಇನ್ನೂ ರಾಜ್ಯದಲ್ಲಿ ಎಲ್ಲೆಲ್ಲಿ ಸೋರ್ತಾ ಅದೆ ಸಾ?’ ವಿಚಾರಿಸಿದೆ.

‘ನೋಡ್ಲಾ, ಬಿಟ್‍ಕಾಯಿನ್, ಡ್ರಗ್ಸ್, ಅಕ್ರಮ ಗಣಿಗಾರಿಕೆಗಳಲ್ಲಿ ಜಲಪ್ರಳಯ ಆಗಿ ಪಾಚಿ
ಗಟ್ಟೋಗ್ಯದೆ! ಈಗೀಗ ವೀನಿವರ್ಸಿಟಿಗಳಲ್ಲೂ ಲಕ್ಷದ ಲೆಕ್ಕದೇಲಿ ಪರ್ಸೆಂಟೇಜ್ ಸೋರ್ತಾ ಅದಂತೆ! ಸರ್ಕಾರಗಳು, ಪಾಲಿಕೆಗಳು, ಪ್ರಾಧಿಕಾರಗಳು, ಇಲಾಖೆಗಳು ಸಿಕ್ಕಾಪಟ್ಟೆ ಸೋರ್ತಾ ಅವೆ. ಬಿಡಿಎಗೆ ನುಂಗಸಿಗಳು ನುಗ್ಗಿ ರೂಫೆಲ್ಲಾ ತೂತಾಗಿ ತಾರಾಮಾರಾ ಸೋರ್ಯದಂತೆ. ‘ಕರ್ನಾಟಕದ ಗುತ್ತಿಗೆದಾರರ ಪರ್ಸೆಂಟೇಜು 10ರಿಂದ 40ಕ್ಕೆ ಏರಿ ಸೋರಿಕೆಯಾಯ್ತಾದೆ. ವಸಿ ನೋಡಿ’ ಅಂತ ಲೆಟರ್ ಬರೆದ್ರೂ ಮೋದಿ ಚಿಗಪ್ಪ ‘ಹೊಸ ಭಾರತ ಕಟ್ಟುವಾಗ ಇವೆಲ್ಲಾ ಸೋರದು ಸಾಮಾನ್ಯ’ ಅಂದಿಲ್ಲವಂತೆ ಕನೋ’ ಅಂತಂದ್ರು.

‘ಸಾ, ಇಷ್ಟೆಲ್ಲಾ ಸೋರಕ್ಕೆ ಕಾರಣವಾಗಿರೋ ಜಲಗಂಡರ ಏನಂತ ಕರೀಬೌದು ಸಾ!’ ಕೇಳಿದೆ.

‘ಇವರ ಖಜಾನೆ ಒಳಿಕ್ಕೆ ಪರ್ಸೆಂಟೇಜ್ ಜಲ ಸದಾ ಸೋರುತ್ಲೇ ಇರದ್ರಿಂದ ಇವರಿಗೆ ತೀರ್ಥರೂಫುಗಳು ಅಂತ ಹೇಳಬೌದು
ಕಜಾ!’ ಅಂದಾಗ ನನಗರ್ಥವಾಯ್ತು ತೀರ್ಥರೂಫುಗಳು ಸೋರಕ್ಕೆ ನಮ್ಮ
ಅಜ್ಞಾನವೇ ಕಾರಣ ಅಂತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.