ADVERTISEMENT

ಚುರುಮುರಿ: ಖರಾಬ್ ಐಟಂಗಳು

ಲಿಂಗರಾಜು ಡಿ.ಎಸ್
Published 1 ಮಾರ್ಚ್ 2021, 19:31 IST
Last Updated 1 ಮಾರ್ಚ್ 2021, 19:31 IST
CamScanner 11-18-2020 18.29.30churumuri-02-03-2021
CamScanner 11-18-2020 18.29.30churumuri-02-03-2021   

‘ನೋಡಿ ಸಾ, ವಿರೋಧ ಪಕ್ಸದೋವು ಮಾಡ ಕ್ಯಾಮೆ ಬುಟ್ಟು ಹ್ಯಂಗೆ ಉಚಾಯಿಸಿಕ್ಯಂಡು ಮಾತಾಡ್ತಾ ಕೂತವೆ. ಅವುನ್ನ ಕಂಡ್ರೆ ಇವನಿಗಾಗಕುಲ್ಲ, ಇವುನ್ನ ಕಂಡರೆ ಅವನಿಗಾಗಕುಲ್ಲ. ಇವರಿಬ್ಬರುನ ಕಂಡರೆ ಮೂರನೇಯವನಿಗಾಗಕುಲ್ಲ!’ ತುರೇಮಣೆಗೆ ಹೇಳಿದೆ.

‘ಅಧಿಕಾರ ಇಲ್ಲದಾಗ ಇನ್ನೊಬ್ಬನ್ನ ಬೋದು ಬೋದು ದಬ್ಬಾಕ್ತವೆ. ಅಧಿಕಾರ ಸಿಕ್ಕಿದೇಟಿಗೆ ಮದಲಿಂಗನ ಥರಾ ಆಗೋಯ್ತವೆ’ ಅಂತು ಯಂಟಪ್ಪಣ್ಣ. ‘ರಾಜಕೀಯದ ಕೂಟಕರ್ಮದೇಲಿ ಯಂತ್ರ, ತಂತ್ರ, ಕುತಂತ್ರ, ಬೈಗಳು ಇವೆಲ್ಲಾ ಸಾಮಾನ್ಯ ಕನ್ರೋ! ಅದೃಷ್ಟ ಖರಾಬಾಗಿ
ದ್ದೋರಿಗೆ ಖೇಲ್ ಖತಂ ನಾಟಕ್ ಬಂದ್!’ ತುರೇಮಣೆ ವಿವರಿಸಿದರು.

‘ಅಯ್ಯ ನಿಮ್ಮ, ಬರೀ ಗುನ್ನಂಪಟ್ಟೆ ತೋರಿಸ್ತೀರಲ್ಲಾ ಸಾ’ ಅಂದೆ ಬೇಜಾರೇಲಿ.

ADVERTISEMENT

‘ನೋಡೋ, ರಾಜಕೀಯದೇಲಿ ವಯಸ್ಸು, ಟೈಮು, ದುಡ್ಡು ಅಂತ ಮೂರು ಖರಾಬ್ ಐಟಮ್ಮುಗಳವೆ. ಇವೇ ರಾಜಕಾರಣಿ ಭವಿಷ್ಯ ತೀರ್ಮಾನ ಮಾಡದು. ಇವು ಯಾವತ್ತೂ ಒಂದಿಗಿರಲ್ಲ, ಯಾರೂ ತಂದುಕೊಡಂಗಿಲ್ಲ! ಇವು ಮೂರು ಚಿಕ್ಕ ವಯಸ್ಸಲ್ಲೇ ಸಿಕ್ಕಿದೋನು ರಾಜಕೀಯದೇಲಿ ಗೆಟನ್ ಆಯ್ತನೆ ಕಯ್ಯಾ’ ಅಂದು ಆಕಳಿಸಿದರು.

‘ಅದೇನು ಬುಡಸೇಳಿ ಸಾ’ ಅಂದೆ.

‘ಬುಡಸಾಕೆ ಅದೇನು ನಲ್ಲಿಮೂಳೆನಾ ಬೊಡ್ಡಿಹೈದ್ನೆ. ಯೇಳ್ತಿನಿ ತಿಳಕೋ! ಚಿಕ್ಕ ವಯಸ್ಸಿಗೆ ರಾಜಕೀಯಕ್ಕೆ ಬಂದೋನಿಗೆ ಬೇಜಾನ್ ಟೈಮಿರತದೆ. ಆದರೆ ಬೇಕಾದ್ದು ಅನುಭವಿಸಕೆ ದುಡ್ಡಿರಲ್ಲ. ರಾಜಕೀಯದೇಲಿ ಹತ್ತಾರು ವರ್ಷ ಪಳಗಿದೋನಿಗೆ ವಯಸ್ಸು ಇರತದೆ, ದುಡ್ಡೂ ಇರತದೆ ಆದ್ರೆ ಟೈಮೇ ಇರಲ್ಲ. ಇನ್ನು ಅಧಿಕಾರ ಸಿಕ್ಕಿ ಮುದಿಯಾದ ಮ್ಯಾಲೆ ಬೇಕಾದಷ್ಟು ಟೈಮಿರತದೆ ದುಡ್ಡಿರತದೆ ಆದರೆ ಅನುಭವಿಸೋ ವಯಸ್ಸಿರಲ್ಲ. ಇದೇ ರಾಜಕೀಯದ ಭಗವದ್ಗೀತೆ ಕನ್ರೋ ಹೈವಾನುಗಳಾ!’ ಅಂದ್ರು ತುರೇಮಣೆ.

‘ಸಾ, ಈ ಭಗವದ್ಗೀತೇಲಿ ಜನಸಾಮಾನ್ಯರ ಪಾಡು ಹ್ಯಂಗೆ?’ ಪ್ರಶ್ನೆ ಮಾಡಿದೆ.

‘ಬರೀ ಬಂಡಾಟ ಕನ್ರೋ. ಹಗಲು ಸತ್ತರೆ ಅಕ್ಕೀಗೆ ಗತಿಲ್ಲ, ಇಳ್ಳು ಸತ್ತರೆ ಎಣ್ಣೆಗೆ ಗತಿಲ್ಲ!’ ಕಷ್ಟಾಚಾರದ ಕತೆ ಕೇಳಿ ಸನ್ನಿ ಹಿಡಿದಂಗಾಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.