ADVERTISEMENT

ಚುರುಮುರಿ | ಪ್ರೇಮ ಪುರಾಣ!

ಬಿ.ಎನ್.ಮಲ್ಲೇಶ್
Published 18 ಫೆಬ್ರುವರಿ 2022, 20:30 IST
Last Updated 18 ಫೆಬ್ರುವರಿ 2022, 20:30 IST
   

ಪತ್ರಕರ್ತ ತೆಪರೇಸಿಯ ಒಂದು ಕಣ್ಣು ಊದಿಕೊಂಡಿತ್ತು. ಎರಡೂ ಕೆನ್ನೆಗಳ ಮೇಲೆ ಯಾರೋ ಚೆನ್ನಾಗಿ ಬಾರಿಸಿದ ಗುರುತುಗಳಿದ್ದವು. ಹರಟೆಕಟ್ಟೆ ಗೆಳೆಯರಿಗೆ ಗಾಬರಿಯಾಯಿತು. ‘ಏನೋ ಇದು ತೆಪರ? ಯಾಕೆ, ಏನಾತು?’ ಗುಡ್ಡೆ ಆತಂಕ ವ್ಯಕ್ತಪಡಿಸಿದ. ತೆಪರೇಸಿ ಮಾತಾಡಲಿಲ್ಲ.

‘ಮೊನ್ನೆ ಅಸೆಂಬ್ಲೀಲಿ ಈಶ್ವರಪ್ಪ, ಡಿಕೆಶಿ ಜಗಳನೇನಾದ್ರು ಬಿಡ್ಸಾಕೆ ಹೋಗಿದ್ದೇನೋ?’ ದುಬ್ಬೀರ ವಿಚಾರಿಸಿದ.

‘ಅಥ್ವ ಹಿಜಾಬು- ಕೇಸರಿ ಶಾಲು ಗಲಾಟೆಲೇನಾದ್ರು ಸಿಕ್ಕಾಕಂಡಿದ್ಯಾ?’ ಕೊಟ್ರೇಶಿ ಪ್ರಶ್ನೆ. ತೆಪರೇಸಿ ಪಿಟಿಕ್ಕೆನ್ನಲಿಲ್ಲ.

ADVERTISEMENT

‘ನಂಗೇನೋ ಇವ್ನು ಕುಮಾರಸ್ವಾಮಿ- ಸಿದ್ರಾಮಣ್ಣನ ಜಂಟಿ ಇಂಟ್ರೂ ಮಾಡೋಕೋಗಿ ಏನೋ ಯಡವಟ್ಟು ಮಾಡ್ಕಂಡಾನೆ ಅನ್ಸುತ್ತಪ್ಪ’ ಪರ್ಮೇಶಿ ಅನುಮಾನ ವ್ಯಕ್ತಪಡಿಸಿದ.

‘ಯಾಕೋ ಮಾತಾಡ್ತಿಲ್ಲ? ರಾತ್ರಿ ಜಾಸ್ತಿ ತಗಂಡು ಎಲ್ಲಾದ್ರು ಬಿದ್ದುಬಂದ್ಯೋ ಹೆಂಗೆ?’ ದುಬ್ಬೀರ ನಕ್ಕ. ತೆಪರೇಸಿ ಬಾಯಿ ಬಿಡಲಿಲ್ಲ.

ಅಷ್ಟರಲ್ಲಿ ಅಲ್ಲಿಗೆ ಬಂದ ಚಾದಂಗಡಿ ಮಂಜಮ್ಮ ‘ಇದು ತೆಪರೇಸಿ ಪ್ರೇಮ ಪುರಾಣ ಕಣ್ರೋ’ ಎಂದಳು ನಗುತ್ತ. ‘ಏನು? ಪ್ರೇಮ ಪುರಾಣನ? ಅಂದ್ರೆ?’ ಗುಡ್ಡೆಗೆ ಕುತೂಹಲ.

‘ಮೊನ್ನೆ ವ್ಯಾಲೆಂಟೈನ್ಸ್ ಡೇ ಇತ್ತಲ್ಲ, ಅವತ್ತು ತೆಪರೇಸಿಗೆ ಯಾರೋ ಹುಡುಗಿ ಕಾಲ್ ಮಾಡಿ ‘ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಅಂದ್ಲಂತೆ. ‘ನೀವು ಹ್ಯಾಂಡ್‌ಸಮ್ಮಾಗಿದೀರ. ನಿಮ್ಮನ್ನ ಕಂಡ್ರೆ ನಂಗೆ ತುಂಬಾ ಇಷ್ಟ...’ ಅಂದ್ಲಂತೆ.

‘ಅಲೆ ಇವ್ನ, ಮುಂದೆ?’

‘ಸಂಜೆ ಎಲ್ಲಾದ್ರು ಸಿಗೋಣ್ವ ಅಂತ ಕೇಳಿದ್ಲಂತೆ’

‘ಬಪ್ಪರೆ ಮಗನೆ, ಆಮೇಲೆ?’

‘ಸಂಜೆ ಅವಳು ಕರೆದ ಜಾಗಕ್ಕೆ ಇವನು ಹೋಗಿ ಹಿಂಗೆ ಹೊಡ್ತ ತಿಂದು ಬಂದಿದಾನೆ... ಶೂರ’ ಮಂಜಮ್ಮ ವರದಿ ಒಪ್ಪಿಸಿದಳು.

‘ಅರೆ, ಅವಳೇ ಕರೆದ ಮೇಲೆ ಮತ್ತೆ ಹೊಡೆದಿದ್ಯಾಕೆ?’ ಪರ್ಮೇಶಿ ಕೇಳಿದ.

‘ಯಾಕೇಂದ್ರೆ ಕಾಲ್ ಮಾಡಿದ್ದು ಯಾರೋ ಹುಡುಗಿ ಅಲ್ಲ, ತೆಪರನ ಹೆಂಡ್ತಿ ಪಮ್ಮಿ! ಹುಡುಗಿ ಬೇಕಾ ಅಂತ ಹಿಡ್ಕಂಡು ಚೆನ್ನಾಗಿ ಇಕ್ಕಿದ್ಲಂತೆ’.

‘ಹೌದಾ? ಎಲಾ ಚಪಲ ಚೆನ್ನಿಗರಾಯ’ ಎಂದ ದುಬ್ಬೀರ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.