ADVERTISEMENT

ಚುರುಮುರಿ: ಹೊಸ ಪುಣ್ಯ ಸಂಪಾದನೆ

ಸುಮಂಗಲಾ
Published 2 ಜನವರಿ 2022, 19:31 IST
Last Updated 2 ಜನವರಿ 2022, 19:31 IST
   

‘ನನಗ ಹೊಸ ವರ್ಸಕ್ಕ ಹೊಸಾ ಸೈಕಲ್ಲಾದ್ರೂ ಕೊಡಿಸು’ ಎಂದು ಬೆಕ್ಕಣ್ಣ ಒಂದೇ ಸಮನೆ ವರಾತ ಹಚ್ಚಿತ್ತು. ‘ನಿನಗ್ಯಾಕಲೇ ಸೈಕಲ್ಲು? ನಮ್ಮನಿ ಸುತ್ತಮುತ್ತ ರಸ್ತೇನೇ ಇಲ್ಲ. ಎಲ್ಲಾ ಕಡಿಗಿ ಬರೀ ಗುಂಡಿ... ನೀ ಸೈಕಲ್ ಸವಾರಿ ಹೋದ್ರ ಗುಂಡೀವಳಗ ಬೀಳತೀ ಅಷ್ಟೆ’ ಎಂದೆ.

‘ಮೋದಿ ಮಾಮಾನ ಓಡಾಟಕ್ಕೆ ಅಂತ ಎಸ್ಪಿಜಿಯವರು 12 ಕೋಟಿದು ಮರ್ಸಿಡಿಸ್ ಕಾರು ತಗಂಡಾರಂತ. ನನಗ ನೋಡಿದ್ರ ಒಂದ್ ಸೈಕಲ್ಲಿಗೂ ಗತಿ ಇಲ್ಲ’ ಎಂದು ಅಳುಮೋರೆ ಮಾಡಿತು.

‘ಸರಿ, ಅವರು ಬಳಸಿಬಿಟ್ಟ ಆ ಹಳೇ ಕಾರು ಕೊಡು ಅಂತ ನಿನ್ನ ಮೋದಿಮಾಮಾಗೇ ಕೇಳು’ ನಾ ನಕ್ಕೆ.

ADVERTISEMENT

‘ನೀ ಏನರ ಒಂದ್ ಅಡ್ಡಮಾತು ಹೇಳತೀ...’ ಎಂದು ಮೂತಿ ಉಬ್ಬಿಸಿತು.

‘ಮೋದಿಮಾಮಾನ ಹೊಸ ‘ಕಾರುಬಾರು’ ವಿಷಯ ಬಿಡು. ನೋಡಿಲ್ಲಿ, ಭೂಮಿ ಹುಟ್ಟಿದಾಗಿನಿಂದಲೂ ಅರುಣಾಚಲ ಪ್ರದೇಶ ನಮ್ಮದಾಗಿತ್ತು ಅಂತ್ಹೇಳಿ ಚೀನಾದವ್ರು ಹದಿನೈದು ಸ್ಥಳಕ್ಕೆ ಹೊಸ ಹೆಸರು ಇಟ್ಟಾರಂತ’ ಎಂದು ವಿಷಯ ಬದಲಿಸಿದೆ.

‘ಇಡಲೇಳು... ಹೆಸರಿಟ್ಟಾಕ್ಷಣ ಅದ್ ಅವರಿದ್ದು ಆಗಂಗಿಲ್ಲ. ಹೆಸರಿನಲ್ಲೇನಿದೆ ಅಂತ ಷೇಕ್ಸ್‌ಪಿಯರ್‌ ಹೇಳಿಲ್ಲೇನು. ಅವರ್ ನಮ್ಮ ಭೂಪ್ರದೇಶದ ಹೆಸರು ಏನರ ಬ್ಯಾರೆ ಇಡಲಿ, ನಾವು ನಮ್ಮದೇ ನಗರಗಳ ಹೆಸರನ್ನು ಬದಲೀ ಮಾಡಿ, ಶುದ್ಧ ಹೆಸರು ಇಡೂದನ್ನು ಈ ವರ್ಷನೂ ಮುಂದುವರೆಸೂಣು’ ಎಂದು ಉಡಾಫೆಯಿಂದ ಹೇಳಿ ಪೇಪರು ಓದ
ತೊಡಗಿತು. ಮರುಕ್ಷಣದಲ್ಲೇ ಹೊಸ ಪ್ಲಾನು ಹಾಕಿತು.

‘ನನಗ ಒಂದು ಕೋಟಿ ರೂಪಾಯಿ ಕೊಡು’ ಎಂದಿತು. ‘ನನ್ನ ಹತ್ರ ಒಂದ್ ದಮ್ಮಡಿ ಇಲ್ಲ. ಎದಕ್ಕ ಅಷ್ಟಕೊಂದು ರೊಕ್ಕ’ ಗಾಬರಿಯಾದೆ.

‘ತಿರುಪತಿವಳಗ ಉದಯಾಸ್ತಮಾನ ಸೇವೆ ಶುರುವಾಗತೈತಿ. ಸುಪ್ರಭಾತದಿಂದ ರಾತ್ರಿ ತಿಮ್ಮಪ್ಪನ್ನ ಏಕಾಂತದಾಗೆ ಮಲಗಿಸೂತನಕ ಮಾಡೂ ಎಲ್ಲಾ ಪೂಜೇನೂ ಅಲ್ಲೇ ಹತ್ತಿರದಾಗೆ ಕುಂತು ನೋಡಬೌದಂತೆ. ಹೊಸಾ ವರ್ಸದಾಗೆ ಹೊಸ ಪುಣ್ಯ ಸಂಪಾದನೆ ಮಾಡತೀನಿ’ ಎಂದು ಮುಸಿಮುಸಿ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.