ADVERTISEMENT

ಚುರುಮುರಿ | ಹಿಟ್ನಾಳ್ ಹಿಟ್

ಸಿ.ಎನ್.ರಾಜು
Published 28 ಅಕ್ಟೋಬರ್ 2022, 21:30 IST
Last Updated 28 ಅಕ್ಟೋಬರ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಆರ್ಥಿಕ ದುಃಸ್ಥಿತಿ ಸುಧಾರಣೆಗೆ ದೇವರೇ ದಿಕ್ಕು. ಕರೆನ್ಸಿ ನೋಟುಗಳಲ್ಲಿ ದೇವರ ಚಿತ್ರ ಮುದ್ರಿಸಿದರೆ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆ ಆಗುತ್ತೆ ಅಂತ ಕೇಜ್ರಿವಾಲ್ ಹೇಳಿದ್ದಾರೆ ಕಣ್ರೀ...’ ಅಂದಳು ಅನು.

‘ಹೌದು, ಪ್ರಯತ್ನ ನಮ್ಮದಾದರೂ ಫಲ ಪರಮಾತ್ಮನದು. ಆರ್ಥಿಕ ವ್ಯವಸ್ಥೆ ಮಾತ್ರವಲ್ಲ, ರಾಜಕೀಯ ವ್ಯವಸ್ಥೆಯೂ ಹದಗೆಟ್ಟಿದೆಯಂತೆ. ಎಲೆಕ್ಷನ್ ಟೈಮ್‌ನಲ್ಲಿ ರಾಜಕಾರಣಿಗಳನ್ನು ಕಂಟ್ರೋಲ್ ಮಾಡೋದು ಕಷ್ಟ ಆಗಿದೆಯಂತೆ’ ಅಂದ ಗಿರಿ.

‘ಹೌದಂತೆ. ತಮ್ಮ ನಾಯಕರ ವಿರುದ್ಧವೇ ಪದೇಪದೇ ಬ್ಯಾಟ್ ಬೀಸುತ್ತಿರುವ ಹಿಟ್ನಾಳರನ್ನೂ ಕಂಟ್ರೋಲ್ ಮಾಡುವಂತಹ ಸಮರ್ಥ ಬೌಲರ್‌ಗಳು ಶಿಸ್ತಿನ ಪಕ್ಷದಲ್ಲಿ ಇಲ್ಲ ಅಂತ ಕಾಂಗ್ರೆಸ್‍ನವರು ಕಾಲೆಳೆಯುತ್ತಿದ್ದಾರೆ’.

ADVERTISEMENT

‘ನೋ ಬಾಲ್, ವೈಡ್ ಎಸೆದು ಬ್ಯಾಟರ್‌ನ ಕಂಟ್ರೋಲ್ ಮಾಡಲಾಗುತ್ತಾ? ಬೋಲ್ಡ್ ಆಗದ, ಕ್ಯಾಚಾಗದ ಫ್ರೀ ಹಿಟ್ ಕೊಟ್ಟರೆ ಬೌಂಡರಿ, ಸಿಕ್ಸರ್ ಬಾರಿಸದೆ ಬಿಡ್ತಾರಾ?’

‘ಹಿಟ್ನಾಳ ಬ್ಯಾಟಿಂಗ್ ಶಕ್ತಿ ಹಿಂದೆ ಕಿಲಾಡಿ ಕೋಚ್ ಇದ್ದಾರಂತೆ. ತಮ್ಮನ್ನು ಔಟ್ ಮಾಡಿ ಪೆವಿಲಿಯನ್‍ಗೆ ಕಳಿಸುವ ಪ್ರಯತ್ನ ಮಾಡಿದ್ರೆ ನಿಜವಾದ ಹಾವು ಬಿಡಬೇಕಾಗುತ್ತದೆ ಎಂದು ಹಿಟ್ನಾಳರು ಬುಟ್ಟಿಯ ಭಯ ತೋರಿಸಿದ್ದಾರಂತೆ’.

‘ಬುಟ್ಟಿಯಲ್ಲಿರುವುದು ಸಿ.ಡಿ ಹಾವೇ, ಭ್ರಷ್ಟಾಚಾರದ ಹಾವೇ ಎಂಬ ಕುತೂಹಲದಿಂದ ಕೈ ನಾಯಕರು ಬುಟ್ಟಿಗೆ ಕೈ ಹಾಕುತ್ತಿದ್ದಾರಂತೆ’.

‘ಬಿಜೆಪಿಯ ಬುಟ್ಟಿ ವಿಚಾರ ಕಾಂಗ್ರೆಸ್‍ನವರಿಗೆ ಯಾಕಂತೆ?’

‘ಬಿಜೆಪಿಯವರು ಕಾಂಗ್ರೆಸಿನ ಕಿಟಕಿ ಇಣುಕುತ್ತಾರಂತೆ, ಇವರು ಅವರ ಬುಟ್ಟಿ ಇಣುಕಿದರೆ ಏನು ತಪ್ಪು?’

‘ಬುಟ್ಟಿಯಲ್ಲಿ ಹೆಡೆ ಎತ್ತುವ, ತೊಡೆ ತಟ್ಟುವ ಹಾವಿದೆ. ಕಾಂಗ್ರೆಸ್‍ನವರು ಪುಂಗಿ ಊದಿ ಹಾವನ್ನು ಕೆಣಕಿ ಕೆರಳಿಸುತ್ತಿದ್ದಾರೆ. ಅದು ಹೊರ ಬಂದರೆ ಯಾರ್‍ಯಾರಿಗೆ ಕಚ್ಚುವುದೋ ಗೊತ್ತಿಲ್ಲ, ಎಲೆಕ್ಷನ್ ಮುಗಿಯೋವರೆಗೂ ಹಾವಿನ ತಂಟೆಗೆ ಹೋಗ್ಬೇಡಿ ಅಂತ ಕಮಲಪತಿಗಳು ತಮ್ಮವರಿಗೆ ಎಚ್ಚರಿಕೆ ನೀಡಿದ್ದಾರಂತೆ...’ ಅಂದಳು ಅನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.