ADVERTISEMENT

ಚುರುಮುರಿ: ಫೇಕ್ ನ್ಯೂಸ್ ಪಾರ್ಟಿ!

ಪ್ರಜಾವಾಣಿ ವಿಶೇಷ
Published 21 ಜೂನ್ 2023, 22:32 IST
Last Updated 21 ಜೂನ್ 2023, 22:32 IST
   

–ಗುರು ಪಿ.ಎಸ‘

ಈ ಗ್ಯಾರಂಟಿಗಳು ಎಷ್ಟೊಳ್ಳೆ ಸ್ಕೀಮ್‌ಗಳು. ಬೇರೆ ಪಾರ್ಟಿಯವರಾದರೂ ಅವರನ್ನ ಮೆಚ್ಚಿಕೊಳ್ಳಲೇಬೇಕು. ಸರ್ಕಾರಿ ಸೇವೆಗಳ ಲಾಭ ಜನರಿಗೆ ಇಷ್ಟ್ ನೇರವಾಗಿ ಸಿಕ್ಕಿದ್ದನ್ನ ನಾನು ಈಗಲೇ ನೋಡ್ತಿರೋದು’ ತನ್ನ ಪಾರ್ಟಿ ಮೀಟಿಂಗ್‌ನಲ್ಲೇ ಎದುರು ಪಾರ್ಟಿಯನ್ನು ಹೊಗಳ್ತಿದ್ದ ಮುದ್ದಣ್ಣ.

‘ರೀ, ಬಾಯ್ಮುಚ್ರಿ ಸಾಕು. ಜನಗಳ ಮುಂದೆಯೂ ಹೀಗೇ ಮಾತಾಡಿಬಿಟ್ಟೀರಾ. ನಾವು ಅಪೋಸಿಷನ್ ಪಾರ್ಟಿಯವರು, ಎಲ್ಲವನ್ನೂ ವಿರೋಧಿಸಬೇಕು’ ಬೈದ್ರು ಪಾರ್ಟಿ ಲೀಡರ್. ಅಲ್ಲಿಂದ ಬಂದವನೇ ಜನಸಾಗರದ ಮುಂದೆ ನಿಂತ ಮುದ್ದಣ್ಣ, ‘ನೋಡಿ ಈ ಬಿಟ್ಟಿ ಭಾಗ್ಯಗಳಿಂದ ರಾಜ್ಯಕ್ಕೆ ಹೊರೆ ಆಗುತ್ತೆ. ಬಸ್‌ಗಳಲ್ಲಿ ಓಡಾಡಬೇಡಿ, ಕರೆಂಟ್ ಬಳಸಬೇಡಿ, ಅಕ್ಕಿ ತಗೋಬೇಡಿ’ ಭಾಷಣ ಶುರುವಾಯ್ತು.

ADVERTISEMENT

‘ನೀವೂ ಕೊಡಲಿಲ್ಲ, ಈಗ ಫ್ರೀ ಆಗಿ ಕೊಡ್ತಿರೋದನ್ನೂ ಬಳಸಬೇಡಿ ಅಂತೀಯಲ್ಲೋ ಬೇವರ್ಸಿ’ ಅಜ್ಜಿಯೊಬ್ಬರು ಕೆರಳಿದರು.

‘ಇದ್ಯಾಕೋ ಉಲ್ಟಾ ಆಯ್ತು’ ಅಂದ್ಕೊಂಡ‌ ಮುದ್ದಣ್ಣ, ‘ಆಯ್ತು, ಆಯ್ತು. ಎಲ್ಲ ಮಹಿಳೆಯರು ರಾಜ್ಯ ಪೂರ್ತಿ ಬಸ್‌ನಲ್ಲಿ ಸುತ್ತಿ. ಸಂಪೂರ್ಣ 200 ಯೂನಿಟ್ ಕರೆಂಟ್ ಬಳಸಿ. ಇದರ ಜೊತೆಗೆ, ಹತ್ತಲ್ಲ, 15 ಕೇಜಿ ಅಕ್ಕಿ ಫ್ರೀ ಕೊಡಿ ಅಂತಾ ನಾವು ರಾಜ್ಯ ಸರ್ಕಾರವನ್ನ ಒತ್ತಾಯಿಸ್ತೀವಿ’ ಭಾಷಣ ಬಿರುಸಾಯ್ತು.

‘ಬಿಟ್ಟಿ ಭಾಗ್ಯಗಳಿಂದ ರಾಜ್ಯಕ್ಕೆ ಹೊರೆ ಅಂತೀಯಾ, ಈಗ ಎಲ್ಲವನ್ನೂ ಜಾಸ್ತಿ ಬಳಸಿ ಅಂತಾನೂ ಹೇಳ್ತೀಯಾ, ನಿನಗೆ ರಾಜ್ಯದ ಹಿತಕ್ಕಿಂತ ರಾಜಕೀಯವೇ ಮುಖ್ಯವಾಯ್ತಾ ಮೂದೇವಿ’ ಹಿರಿಯರೊಬ್ಬರು ಮೂತಿಗೆ ತಿವಿದರು.

‘ಥೋ, ಈ ಗ್ಯಾರಂಟಿ ಪರ ಮಾತಾಡಿದ್ರೆ ಪಾರ್ಟಿಯವರು ಬೈತಾರೆ, ವಿರುದ್ಧ ಮಾತಾಡಿದ್ರೆ ಜನ ಉಗೀತಾರೆ’ ಅಂತಾ ಗೊಣಗಿದ ಮುದ್ದಣ್ಣ, ‘ಮುಂದೆ ನಾವು ಬೇರೆ ವಿಷಯ ಇಟ್ಕೊಂಡು ಹೋರಾಟ ಮಾಡ್ತೀವಿ’ ಎಂದ.

‘ಯಾವ ವಿಷಯ ಸರ್?’ ಕೇಳ್ದ ಅಸಿಸ್ಟೆಂಟ್ ವಿಜಿ.

‘ಫೇಕ್ ನ್ಯೂಸ್ ಹರಡುವವರಿಗೆ ಜೈಲು ಶಿಕ್ಷೆ ಕೊಡೋ ಕಾನೂನನ್ನ ಈ ಸರ್ಕಾರ ತರೋಕೆ ಹೊರಟಿದೆ. ಅದರ ವಿರುದ್ಧ ಹೋರಾಡ್ತೀವಿ’.

‘ಸರ್, ಆಗ ಫೇಕ್ ನ್ಯೂಸ್ ಜನಕರು ನಿಮ್ಮ ಪಾರ್ಟಿಯವರೇ ಅನ್ನಂಗಾಗುತ್ತೆ ಸರ್’ ನಕ್ಕ ವಿಜಿ.

ಸ್ವಲ್ಪ ದಿನ ಸುಮ್ನಿರೋದೇ ವಾಸಿ ಎಂದು ತಲೆ ಮೇಲೆ ಟವೆಲ್ ಹಾಕಿಕೊಂಡ ಹೊರಟ ಮುದ್ದಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.