ADVERTISEMENT

ಚುರುಮುರಿ | ಉಡುಗೊರೆ ಸಮಸ್ಯೆ

ಪ್ರಜಾವಾಣಿ ವಿಶೇಷ
Published 24 ಮೇ 2023, 23:18 IST
Last Updated 24 ಮೇ 2023, 23:18 IST
   

ಆನಂದ

‘ನಮ್ಮ ಹೊಸ ಮುಖ್ಯಮಂತ್ರಿಗೆ ಜೀರೊ ಟ್ರಾಫಿಕ್ ಬೇಡವಂತೆ ಕಣ್ರೀ’ ಅಂದಳು ಮಡದಿ.

‘ಅಂದರೆ, ಸದ್ಯಕ್ಕೆ ಇರುವ ಒಬ್ಬರೇ ಉಪಮುಖ್ಯಮಂತ್ರಿಗೂ ಜೀರೊ ಟ್ರಾಫಿಕ್ ಸೌಲಭ್ಯ ಇರದು’ ಅಂದೆ.

ADVERTISEMENT

‘ನಾಳೆ ನೇಮಕಗೊಳ್ಳಬಹುದಾದ ಉಪಮುಖ್ಯಮಂತ್ರಿಗಳಿಗೂ ಅದು ಇರದು. ಅಂದರೆ, ತುಮಕೂರಿಗೆ ಹೋಗುವಾಗ ಟ್ರಾಫಿಕ್ ಜಾಮ್ ಇರೋಲ್ಲ ಅನ್ನಿ’.

‘ಅದೇನು ತುಮಕೂರಿಗೆ ಮಾತ್ರ?’‌

‘ಹೋದ ಸಲ ಅಲ್ಲಿನವರು ಉಪಮುಖ್ಯಮಂತ್ರಿ ಆಗಿದ್ದಾಗ ಜೀರೊ ಟ್ರಾಫಿಕ್ ಇರಲೇಬೇಕು ಅಂತ ತಾಕೀತು ಮಾಡಿದ್ದರಂತೆ. ಹೋಗಲಿ ಬಿಡು, ಬೆಂಗಳೂರಿನವರು ಈಗ ಉಸಿರಾಡಬಹುದು’.

‘ಟ್ರಾಫಿಕ್ ಪೊಲೀಸರು ಸಹ. ನಾಳೆ ನಾಲ್ವರು ಉಪಮುಖ್ಯಮಂತ್ರಿಗಳೇನಾದರೂ ನೇಮಕಗೊಂಡು, ಅವರೆಲ್ಲರೂ ನಾಲ್ಕೂ ದಿಕ್ಕಿಗೆ ವಿಸಿಟ್ ಎಂದು ಒಟ್ಟಿಗೆ ಹೊರಟರೆ, ನಾಲ್ಕೂ ಕಡೆ ಜೀರೊ ಟ್ರಾಫಿಕ್ ಆಗಿ ಇಡೀ ಬೆಂಗಳೂರು ಸ್ತಬ್ಧವಾದರೆ? ಈಗ ಆ ಪರಿಸ್ಥಿತಿ ಇರೊಲ್ಲ. ಥ್ಯಾಂಕ್ಯೂ ಸಿದ್ದೂಜಿ’.

‘ಅವರ ಇನ್ನೊಂದು ನಿರ್ಧಾರಕ್ಕೂ ಥ್ಯಾಂಕ್ಸ್ ಹೇಳಿ’.

‘ಅದ್ಯಾವುದು?’

‘ಅವರಿಗೆ ಹಾರ, ಶಾಲು ಬೇಡವಂತೆ’.

‘ಪಾಪ! ಹೂ, ಶಾಲು ಮಾರೋರಿಗೆ ಲಾಸ್...’

‘ಆಗಬಹುದು. ಅದರೆ ನಿಮ್ಮಂತಹ ಶಾಶ್ವತ ಸಾಹಿತ್ಯ ರಚನಕಾರರಿಗೆ ಅನುಕೂಲ ಇದೆ ನೋಡಿ’.

‘ಏನೇ ಹಾಗಂದ್ರೆ?’

‘ಅದೇರಿ, ಹಾರ, ಶಾಲು ಬದಲು ಪುಸ್ತಕ ಕಾಣಿಕೆ ಕೊಡಬಹುದು ಎಂದು ಹೇಳಿದ್ದಾರೆ’.

‘ಅದಕ್ಕೂ ನನಗೂ ಏನು ಸಂಬಂಧ?’

‘ನೀವು ಅವರನ್ನು ನೋಡಲು ಹೋದಾಗ, ಮನೇಲಿ ಖರ್ಚಾಗದೆ ಉಳಿದಿರೋ ನಿಮ್ಮ ಪುಸ್ತಕಗಳನ್ನು– ಅದೇ ಶಾಶ್ವತ ಸಾಹಿತ್ಯ– ಅವರಿಗೆ ಕೊಡಬಹುದು. ಹಾಗೇ ನಿಮ್ಮ ಸ್ನೇಹಿತರೂ ತಮ್ಮ ಮನೇಲಿ ಉಳಿದಿರೋ ಪುಸ್ತಕಗಳ ಸ್ಟಾಕನ್ನು ಕ್ಲಿಯರ್ ಮಾಡಬಹುದು. ಪಾಪ! ಸಿ.ಎಂ ಸಿಬ್ಬಂದಿಗೆ ಅವುಗಳನ್ನು ಜೋಡಿಸಿಡೊ ಕೆಲಸ ಶುರುವಾಗುತ್ತೆ. ಈ ಪಾಟಿ ರದ್ದಿ ಏನು ಮಾಡೋದು ಅಂತ ಅವರೂ ತಲೆ ಕೆಡಿಸ್ಕೊತಾರೆ’.

‘ಸರ್ಕಾರಿ ಲೈಬ್ರರಿಗಳಿಗೆ ಕಳಿಸ್ತಾರೆ ಬಿಡು. ಅಲ್ಲೂ ಇದೇ ಕಳೆ ತುಂಬಿಲ್ಲವೇ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.