ADVERTISEMENT

ಚುರುಮುರಿ: ಫಲಿಸದ ಆಸೆ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 19:31 IST
Last Updated 8 ಏಪ್ರಿಲ್ 2022, 19:31 IST
   

‘ಪ್ರಮಾಣವಚನಕ್ಕೆ ನೀವು ಹೊಲಿಸಿಟ್ಟುಕೊಂಡಿರೋ ಕೋಟಿಗೆ ಬೆಳಕಿನ ಭಾಗ್ಯ ಸದ್ಯ ಸಿಗೋಹಾಗೆ ಕಾಣ್ತಿಲ್ಲ, ಸೀಎಂ ದಿಲ್ಲಿಯಿಂದ ಮತ್ತೆ ಬರಿಗೈಲಿ ಬಂದಿದಾರೆ!’ ಹಿರಿಯ ಶಾಸಕರನ್ನು ಮಡದಿ ರೇಗಿಸಿದರು.

‘ಹಾಗೆ ಹೇಳೋರು ಯಾರು? ಪಕ್ಷದ ಅಧ್ಯಕ್ಷರು, ಜಲ ಸಂಪನ್ಮೂಲ, ಇಂಧನ, ಪರಿಸರ, ರಕ್ಷಣಾ ಖಾತೆ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತಾವಗಳಿಗೆ ಒಪ್ಪಿಗೆ ಕೋರಿದ್ದೇನೆ, ನಿರ್ಮಲಾ ಮೇಡಂ ಅವರಿಂದಲೂ ಅನುಕೂಲಕರ ಪ್ರತಿಕ್ರಿಯೆ ಸಿಕ್ಕಿದೆ, ದಿಲ್ಲಿ ಭೇಟಿ ಯಶಸ್ವಿ ಅಂತ ಸೀಎಂ ಹೇಳಿಲ್ವೆ?’ ಎಂದರು ಶಾಸಕರು.

‘ಹೇಳಿ ಕೇಳಿ ಅವ್ರ ಹೆಸರೇ ಬಸವಣ್ಣ. ಹೈಕಮಾಂಡ್ ಹೇಳಿದ್ದಕ್ಕೆಲ್ಲಾ ತಲೆಯಾಡಿಸುವುದು ಅವರ ಸ್ವಭಾವ ಅಂತಾರೆ ವಿರೋಧ ಪಕ್ಷದವರು’.

ADVERTISEMENT

‘ಇಲ್ಲದಿದ್ರೆ ಅವ್ರ ತಲೆಗೇ ಸಂಚಕಾರವಲ್ವೆ?’

‘ಅಧಿಕಾರ ಅನುಭವಿಸಿದ ಹಳಬರನ್ನು ಬಿಟ್ಟು ಕ್ಯಾಬಿನೆಟ್‌ಗೆ ಹೊಸಬರನ್ನು ತಗೊಳ್ಳೊಕ್ಕೇನ್ರೀ ಕಷ್ಟ?’.

‘ನಿಂಗೆ ಅರ್ಥವಾಗಲ್ಲ ಬಿಡು. ಈಗಿನ ಪರಿಸ್ಥಿತೀಲಿ ಸೀಡಿ ಪ್ರಕರಣದಲ್ಲಿ ಸಿಕ್ಕಿಕೊಂಡವ ರನ್ನು ಹಳಬರು ಅಂತ ಕೈಬಿಡೋಕಾಗುತ್ತಾ? ಹೊಸಬರೂ ಯುವಕರೂ ಅಂತ ಶಾಸಕರಲ್ಲದ ಪಾರ್ಟಿ ಪದಾಧಿಕಾರಿಗಳನ್ನು ತಗೊಳ್ಳಕ್ಕಾಗುತ್ತಾ? ಸ್ವಲ್ಪ ಸುಧಾರಿಸಿಕೋ, ಸದ್ಯದಲ್ಲೇ ನಡೆಯಲಿರೋ ನಮ್ಮ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಆಗಬೌದು’.

‘ಆದಂತೆಯೇ ಬಿಡಿ. ಪೈಲೆಟ್ ಕಾರಿನ ಹಿಂದೆ ಗೂಟದ ಕಾರಿನಲ್ಲಿ ಹೋಗೋದು ನನ್ನ ಹಣೆಯಲ್ಲಿ ಬರೆದಿಲ್ಲ ಅನ್ಸುತ್ತೆ. ಇದನ್ನೆಲ್ಲಾ ನೋಡಿದ್ರೆ ನಂಗೆ ಜೆ.ಎಚ್.ಪಟೇಲರು ಅಸೆಂಬ್ಲೀಲಿ ಹೇಳಿದ, ...ಹೋರಿಯನ್ನು ಬೆನ್ನಟ್ಟಿ ಝಾಡಿಸಿ ಒದೆ ತಿಂದ ನರಿಯ ಕತೆ ನೆನಪಾಗುತ್ತೆ. ಅಷ್ಟೇ ಅಲ್ಲ, ನೋಡಿ ಬೀಚಿಯವರ ಈ ಪುಸ್ತಕದಲ್ಲಿ ಇರುವಂತೆ, ಕತ್ತೆಯೊಂದು ತನ್ನ ಮೇಲೆ ಕುಳಿತವನು ಹಿಡಿದಿರುವ ಉದ್ದ ಕೋಲಿನ ತುದಿಯಲ್ಲಿನ ಹಸಿರು ಹುಲ್ಲನ್ನು ತಿನ್ನಲು ಮಾಡುವ ವ್ಯರ್ಥ ಪ್ರಯತ್ನ ನೆನಪಾಗುತ್ತೆ’.

ಶಾಸಕರು ಆ ಪುಸ್ತಕವನ್ನು ಕಿತ್ತುಕೊಂಡು ಮಡದಿಯತ್ತ ಎಸೆದರು. ಆಕೆ ಉಪಾಯದಿಂದ ಪುಸ್ತಕದ ರಾಕೆಟ್ ದಾಳಿ ತಪ್ಪಿಸಿಕೊಂಡರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.