ADVERTISEMENT

ಚುರುಮುರಿ: ಹಾರಿಬಲ್ ಹಾರಾಟ

ಮಣ್ಣೆ ರಾಜು
Published 19 ಫೆಬ್ರುವರಿ 2025, 0:27 IST
Last Updated 19 ಫೆಬ್ರುವರಿ 2025, 0:27 IST
   

‘ವಿಪರೀತ ಬಿಸಿಲು...’ ಬೆವರು ಒರೆಸಿಕೊಂಡು ಬಂದ ಗೆಳೆಯ ಗೋಪಾಲಿ.

‘ಬೇಸಿಗೇಲಿ ತಾರೆಯರು ಪ್ರವಾಸ, ಶೂಟಿಂಗ್ ಅಂತ ತಣ್ಣಗಿರುವ ದೇಶಗಳಿಗೆ ಹೋಗಿ ಸೌಂದರ್ಯ ಕಾಪಾಡಿಕೊಳ್ತಾರೇನೊ’ ಅಂದ ಶಂಕ್ರಿ.

‘ಅಮೆರಿಕಕ್ಕೆ ಹೋಗಲು ನಮ್ಮವರು ಹಾತೊರೆಯುತ್ತಾರಲ್ಲ, ಅಲ್ಲಿನ ಟೆಂಪರೇಚರ್ ಎಷ್ಟಿದೆ?’ ಕೇಳಿದ ಗೋಪಾಲಿ.

ADVERTISEMENT

‘ಅಮೆರಿಕದ ‘ಟ್ರಂಪ್‍ರೇಚರ್’ ನಮ್ಮವರಿಗೆ ಅನುಕೂಲಕರವಾಗಿಲ್ಲ. ಹೋದವರು ಕೋಳ ತೊಡಿಸಿಕೊಂಡು, ಬಂದ ದಾರಿಗೆ ಸುಂಕವಿಲ್ಲದೆ ವಾಪಸಾಗುತ್ತಿದ್ದಾರೆ’.

‘ಮೋದಿಯವರನ್ನು ಟ್ರಂಪ್ ಗೌರವದಿಂದಲೇ ಕಂಡು ಆತಿಥ್ಯ ನೀಡಿದರಂತೆ ಕಣ್ರೀ. ಆ ಖುಷಿಯಲ್ಲಿ ಭಾರತದಲ್ಲಿ ವಿಶ್ವವಿದ್ಯಾಲಯ ತೆರೆಯಿರಿ ಅಂತ ಮೋದಿ ‘ಇನ್ವೆಸ್ಟ್ ಇಂಡಿಯಾ’ಗೆ ಆಹ್ವಾನಿಸಿದ್ರಂತೆ’.

‘ಅನುದಾನವಿಲ್ಲವೆಂದು ನಮ್ಮಲ್ಲಿನ ಕೆಲವು ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿದ್ದಾರೆ. ಪರದೇಶದವರು ವಿಶ್ವವಿದ್ಯಾಲಯಗಳನ್ನು ಉದ್ದಿಮೆಯಾಗಿ ಸ್ಥಾಪಿಸಬಹುದು. ಯಾಕೆಂದರೆ ಶಿಕ್ಷಣ ಈಗ ವ್ಯಾಪಾರೀಕರಣವಾಗಿದೆ’.

‘ವಿ.ವಿಗಳನ್ನು ಮುಚ್ಚಬೇಡಿ, ಫೇಲಾಗುತ್ತಿರುವ ಪರೀಕ್ಷಾ ವ್ಯವಸ್ಥೆಯನ್ನು ಪಾಸ್ ಮಾಡಿ ಎಂದು ವಿಪಕ್ಷಗಳು ಒತ್ತಾಯಿಸ್ತಿವೆ’.

‘ಮಹಾರಾಷ್ಟ್ರದ ಹುಡುಗನೊಬ್ಬ ನೆಲ ಮಾರ್ಗದ ಟ್ರಾಫಿಕ್‍ಗೆ ಹೆದರಿ ಪ್ಯಾರಾಗ್ಲೈಡ್‍ನಲ್ಲಿ ಹಾರಿಕೊಂಡು ಹೋಗಿ ಪರೀಕ್ಷೆ ಬರೆದನಂತೆ’.

‘ಪ್ಯಾರಾಗ್ಲೈಡ್ ಕೊಡುಸ್ತೀವಿ ಪರೀಕ್ಷೆ ಚೆನ್ನಾಗಿ ಬರಿ ಅಂತ ಅಪ್ಪ ಅಮ್ಮ ಮಕ್ಕಳಿಗೆ ಆಮಿಷ ಒಡ್ಡಬಹುದು. ಬೈಕ್ ಕೇಳುತ್ತಿದ್ದ ಮಕ್ಕಳು ಪ್ಯಾರಾಗ್ಲೈಡ್‍ಗೆ ಹಟ ಮಾಡಬಹುದು!’

‘ಎಲ್ಲರೂ ಹಾರುವ ಮಾರ್ಗ ಅನುಸರಿಸಿದರೆ ಅಲ್ಲೂ ಟ್ರಾಫಿಕ್ ಜಾಮ್, ಆ್ಯಕ್ಸಿಡೆಂಟ್ ಆಗಬಹುದು, ಹಾರಾಟ ಹಾರಿಬಲ್!’

‘ಗಾಬರಿಯಾಗಬೇಡ, ಆಗ ಸರ್ಕಾರ ಹಾರಾಟ ನಿಯಮ ರೂಪಿಸುತ್ತದೆ. ಟ್ರಾಫಿಕ್ ಪೊಲೀಸರು ಹಾರಿಕೊಂಡು ಹೋಗಿ ಹಾರಾಟಗಾರರ ಹೆಲ್ಮೆಟ್, ಇನ್ಷೂರೆನ್ಸ್, ಡ್ರೈವಿಂಗ್ ಲೈಸೆನ್ಸ್ ತಪಾಸಣೆ ಮಾಡಿ, ಟ್ರಾಫಿಕ್ ನಿಯಂತ್ರಿಸಿ ಹಾರಾಟ ಸುರಕ್ಷತೆ ಕಾಪಾಡ್ತಾರೆ’ ಎಂದ ಗೋಪಾಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.