ADVERTISEMENT

ಚುರುಮುರಿ: ಅರ್ಥ, ಅಪಾರ್ಥ!

ಬಿ.ಎನ್.ಮಲ್ಲೇಶ್
Published 21 ನವೆಂಬರ್ 2025, 0:11 IST
Last Updated 21 ನವೆಂಬರ್ 2025, 0:11 IST
   

ಬ್ರೇಕಿಂಗ್ ನ್ಯೂಸ್ ಟೀವಿ ಪತ್ರಕರ್ತ ತೆಪರೇಸಿ ಸಂಪಾದಕರ ಮುಂದೆ ತೆಲಿ ಕೆಡಿಸ್ಕಂಡು ಕೂತಿದ್ದ. ‘ಯಾಕ್ರಿ ತೆಪರೇಸಿ, ಏನಾತು?’ ಸಂಪಾದಕರು ಕೇಳಿದರು.

‘ಏನೂ ಅರ್ಥ ಆಗ್ತಿಲ್ಲ ಸಾ...’ ಎಂದ ತೆಪರೇಸಿ.

‘ಅಂಥಾದ್ದೇನ್ರಿ ನಿಮ್ಗೆ ಅರ್ಥ ಆಗದೇ ಇರೋ ಅಂಥದ್ದು?’

ADVERTISEMENT

‘ಎಲ್ಲದಕ್ಕೂ ಕೊನೆ ಅಂತ ಇರುತ್ತೆ ಅಂದ್ರೆ ಏನ್ಸಾ?’

‘ಹಾಗಂತ ಯಾರು ಹೇಳಿದ್ದು?’

‘ಯಾರರೆ ಹೇಳಿರ್ಲಿ, ಇಲ್ಲಿ ಯಾವುದೂ ಶಾಶ್ವತ ಅಲ್ಲ ಅಂದ್ರೆ ಏನರ್ಥ?’

‘ಗೊತ್ತಿಲ್ಲ...’

‘ಸರಿ, ಕೆಲ್ಸ ಮಾಡೋನೊಬ್ಬ, ಲಾಭ ಪಡೆಯೋನೊಬ್ಬ ಅಂದ್ರೆ?’

‘ಅಂದ್ರೆ ನೀನು ಕೆಲ್ಸ ಮಾಡ್ತಿದೀಯ, ನಾನು ಕೂತ್ಕಂಡು ಸಂಬಳ ತಗೋತಿದೀನಿ ಅಂತಾನಾ?’

‘ಥೋ... ನಿಮ್ ಬಗ್ಗೆ ಅಲ್ಲ ಸಾ... ಈಗ ಎಲ್ಲಿ ಭಕ್ತಿ ಇದೆ, ಅಲ್ಲಿ ಭಗವಂತ ಇರ್ತಾನೆ ಅಂದ್ರೆ?’

‘ಇದ್ರಲ್ಲಿ ಅರ್ಥ ಆಗದೇ ಇರೋ ಅಂಥದ್ದು ಏನಿದೆ? ಯಾರು ಹೇಳಿದ್ರು ಇದನ್ನ?’

‘ಒಬ್ಬ ರಾಜಕಾರಣಿ ಅನ್ಕಳಿ...’

‘ಅಂದ್ರೆ ಹೈಕಮಾಂಡ್ ಮೇಲೆ ಭಕ್ತಿ ಇದ್ರೆ ಅದು ಕುರ್ಚಿ ಕೊಟ್ಟು ಕಾಪಾಡುತ್ತೆ ಅಂತ...’

‘ನಾನು ಅಧಿಕಾರದಲ್ಲಿ ಇರ್ತೀನೋ ಇಲ್ಲವೋ ಗೊತ್ತಿಲ್ಲ ಅಂದ್ರೆ?’

‘ಅಂದ್ರೆ ಹೆಚ್ಚಿನ ಅಧಿಕಾರ ಕೊಟ್ರೆ ಇರ್ತೀನಿ, ಇಲ್ಲಾಂದ್ರೆ ಇಲ್ಲ ಅಂತ ಅರ್ಥ...’

‘ಕರೆಕ್ಟ್... ನಾನೇನು ಓಡಿ ಹೋಗೋ ಮನುಷ್ಯ ಅಲ್ಲ ಅಂದ್ರೆ?’

‘ಏನೇ ಬಂದ್ರೂ ಇಲ್ಲೇ ಇದ್ದು ಎದುರಿಸ್ತೀನಿ ಅಂತ... ಅಲ್ಲ, ಈ ಡೈಲಾಗ್‌ಗಳು ನಮ್ ಬಂಡೆ ಸಾಹೇಬ್ರವು ಅನಿಸ್ತಿದೆ, ಹೌದಾ?’

‘ಹೌದು ಸಾ.‌.. ಎಲ್ಲ ಅವರ ಮಾತೇ, ಆದ್ರೆ ಒಂದೂ ಅರ್ಥ ಆಗ್ತಿಲ್ಲ...’ ತೆಪರೇಸಿ ತೆಲಿ ಕೆರೆದುಕೊಂಡ.

‘ನಿಮ್ತೆಲಿ, ಇದೆಲ್ಲ ಅರ್ಥ ಆಗ್ಬೇಕು ಅಂದ್ರೆ ನಿಮ್ಗೆ ರಾಜಕೀಯ ಡಿಕ್ಷನರಿ ಗೊತ್ತಿರಬೇಕು...’

‘ಇಲ್ಲದಿದ್ರೆ?’

‘ಅರ್ಥ, ಅಪಾರ್ಥ ಆಗಿ ಆಮೇಲೆ ಒದೆ ತಿನ್ಬೇಕಾಗುತ್ತೆ...’

ತೆಪರೇಸಿ ಪಿಟಿಕ್ಕನ್ನಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.