ADVERTISEMENT

ಚುರುಮುರಿ | ಪಾರ್ಕಿನಲ್ಲೊಂದು ಸುತ್ತು...

ಕೆ.ವಿ.ರಾಜಲಕ್ಷ್ಮಿ
Published 10 ಜೂನ್ 2023, 0:14 IST
Last Updated 10 ಜೂನ್ 2023, 0:14 IST
   

ಮನೆಯಲ್ಲಿ ಗ್ಯಾರಂಟಿಗಳದ್ದೇ ಚರ್ಚೆಯ ನಡುವೆ ಎರಡನೇ ಕಾಫಿ ಸಿಗುವ ಗ್ಯಾರಂಟಿ ಕಾಣಿಸದಾಗ ಕಂಠಿಯ ಜೊತೆ ಪಾರ್ಕಿನ ಕಡೆಗೆ ಹೆಜ್ಜೆ ಹಾಕಿದೆ.  

‘ಮೀಟಿಂಗ್ ಶುರುವಾಗಿರುತ್ತೆ ಜಾಯಿನ್ ಆಗೋಣ’ ಎಂದು ಕಂಠಿ ಹೇಳಿದಾಗ, ಏನೂ ಅರ್ಥವಾಗದೆ ಮಿಕ ಮಿಕ ನೋಡಿದೆ. ‘ನೊಂದ ಗಂಡಸರ ಸಂಘ, ಮಳೆ ಬಂದರೆ ನಿಲ್ಲೋಕ್ಕೆ ಶೆಲ್ಟರ್ ಇದೆಯಲ್ಲ? ನಮ್ಮಂಥವರು ದಿನಾಲೂ ಅಲ್ಲಿ ಕುಳಿತು ಕಷ್ಟ ಸುಖ ಹಂಚ್ಕೋತಾರೆ’ ಎಂದು ಸಂಘಕ್ಕೆ ನನ್ನನ್ನು ಪರಿಚಯಿಸಿದ.

‘ಬಸ್ಸಿನಲ್ಲಿ ನಮಗೂ, ಐ ಮೀನ್ ಹಿರಿಯ ನಾಗರಿಕರಿಗೂ ಫ್ರೀ ಇರ್ಬೇಕಿತ್ತು, ಹೊತ್ತು ಹೋಗದಿದ್ದಾಗ ಬಸ್ಸಲ್ಲಿ ಕುಳಿತು ಸುತ್ತಾಡಿಕೊಂಡು ಬರಬಹುದಿತ್ತು’ ಒಬ್ಬರ ಅಳಲು.

ADVERTISEMENT

‘ಗೃಹಲಕ್ಷ್ಮಿ ಯೋಜನೆಯಲ್ಲಿ ಯಾರು ಹೆಡ್ಡು ಅನ್ನೋ ವಿಷಯಕ್ಕೆ ಮನೇಲಿ ನಿತ್ಯ ಜಗಳ, ಕದನ, ಟೈಮ್ ಟೈಮ್‌ಗೆ ಊಟ ತಿಂಡಿ ಕಾಣ್ತಿಲ್ಲ’ ಮತ್ತೊಬ್ಬರ ಸಂಕಟ.

‘ಅಲ್ಲ, ಕರೆಂಟ್ ಫ್ರೀ ಅಂತ ಹೇಳ್ತಿದ್ದ ಹಾಗೇ ಬೆಲೆ ಜಾಸ್ತಿ ಮಾಡಿ ಶಾಕ್ ಕೊಟ್ರು. ಅದು ಇರಲಿ, ಆರು ತಿಂಗಳಿಂದ ಖಾಲಿ ಇದ್ದ ನಮ್ಮ ಮನೆಗೆ ಬಾಡಿಗೆಗೆ ಬರೋಕ್ಕೆ ಹಿಂದೇಟು, ವರ್ಷದ ಸರಾಸರಿ ಯೂನಿಟ್‌ಗೆ ಹೊಡೆತ ಬಿತ್ತಲ್ಲ? ಅದೇ ಪಕ್ಕದ್ಮನೆಗೆ ನಾ ಮುಂದು ತಾ ಮುಂದು ಅಂತ ಮುಗಿಬೀಳ್ತಿದ್ದಾರೆ. ವಿಪರೀತ ಕರೆಂಟ್ ಬಿಲ್ ಬರ್ತಿದ್ದ ಮನೆಗೆ ಡಿಮ್ಯಾಂಡು’.

‘ಹೈದರಾಬಾದಿಗೆ ಮದುವೆಗೆ ಹೋಗ್ಬೇಕು ಖರ್ಚಿಗೆ ದುಡ್ಡು ಅಂದ್ಲು. ಬೀದರ್‌ತನಕ ಫ್ರೀಯಾಗಿ ಹೋಗಿ ಅಲ್ಲಿಂದ ಬಸ್ ಹಿಡಿ ಅಂತ ನಾನು ತಲೆ ಉಪಯೋಗಿಸಿದೆ’.

‘ಡಿಗ್ರಿ ಮುಗಿದ ಮೇಲೆ ಆರು ತಿಂಗಳು ಹಾಯಾಗಿ ರಿಲ್ಯಾಕ್ಸ್ ಆಗಿ, ಎರಡು ವರ್ಷ ನಿರುದ್ಯೋಗ ಭತ್ಯೆ ಎಂಜಾಯ್ ಮಾಡಿ ಆಮೇಲೆ ಕೆಲಸ ನೋಡ್ಕೋತೀನಿ ಅಂತಾನೆ ನನ್ನ ಸೋಮಾರಿ ಸುಪುತ್ರ, ಎಲ್ಲಿ ಹೋಗಿ ತಲೆ ಚಚ್ಕೊಳ್ಳೋದು?’ ಚರ್ಚೆ ರೋಚಕವಾಗಿತ್ತು.

‘ಇವತ್ತು ಕಾಫಿ ಯಾರು ಸ್ಪಾನ್ಸರ್ ಮಾಡ್ತಿರೋದು?’

‘ಇವರು, ಇವತ್ತೇ ಜಾಯಿನ್ ಆಗಿರೋದು’ ಕಂಠಿ ನನ್ನತ್ತ ಬೊಟ್ಟುಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.