ADVERTISEMENT

ಚುರುಮುರಿ: ಗುಂಡಿ ಗಣಿತ

ಮಣ್ಣೆ ರಾಜು
Published 27 ಜುಲೈ 2022, 18:57 IST
Last Updated 27 ಜುಲೈ 2022, 18:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸಾರ್ವಕಾಲಿಕ ಕಾರ್ಯಕ್ರಮ ಆಗಿಬಿಟ್ಟಿದೆ...’ ಸುಮಿ ಗೊಣಗಿಕೊಂಡಳು.

‘ಜನರ ಬಾಯಿ ಮುಚ್ಚಿಸುವಷ್ಟು ಸುಲಭವಾಗಿ ರಸ್ತೆ ಗುಂಡಿ ಮುಚ್ಚಲಾಗುವುದಿಲ್ಲ’ ಅಂದ ಶಂಕ್ರಿ.

‘ರಸ್ತೆ ಗುಂಡಿಗಳು ಎಷ್ಟಿರಬಹುದು?’

ADVERTISEMENT

‘ಉತ್ತರ ಕಷ್ಟ. ದಿನಕ್ಕೆ ಎಷ್ಟು ಗುಂಡಿಗಳು ಬಾಯ್ದೆರೆಯಬಹುದು, ತಿಂಗಳಿಗೆ ಎಷ್ಟು? ವರ್ಷಕ್ಕೆ ಸರಾಸರಿ ಎಷ್ಟು ಗುಂಡಿಗಳು ಹುಟ್ಟಿಕೊಳ್ಳ
ಬಹುದು? ಪ್ರತೀ ಗುಂಡಿಯ ಆಳ, ಅಗಲ ಎಷ್ಟು? ಎಂದೆಲ್ಲಾ ಗುರುತಿಸಿ ಗುಣಿಸಿ, ಭಾಗಿಸಿ, ಕೂಡಿ, ಕಳೆದರೂ ನಿಖರ ಲೆಕ್ಕ ಸಿಗುತ್ತಿಲ್ಲವಂತೆ’.

‘ಗುಂಡಿ ಮುಚ್ಚಲು ಜಲ್ಲಿಯಂತೆ ದುಡ್ಡನ್ನೂ ಸುರಿಯಬೇಕಂತೆ’.

‘ಹೌದು. ಮಳೆಗಾಲದಲ್ಲಿ ಕೆರೆಯ ಹೂಳು ತೆಗೆಯುವುದು, ರಸ್ತೆ ಗುಂಡಿ ಮುಚ್ಚುವುದು ಜಾಣತನ ಅನ್ನೋ ಮಾತಿದೆ’.

‘ಗುಂಡಿರಹಿತ ರಸ್ತೆ ನಿರ್ಮಾಣವಂತೂ ಆಗುತ್ತಿಲ್ಲ, ಗುಂಡಿ ಪರಿಹಾರ ನಿಧಿ ಸ್ಥಾಪಿಸಿ ಗುಂಡಿಗಳಲ್ಲಿ ಬಿದ್ದು ಗಾಯಗೊಂಡವರ ಚಿಕಿತ್ಸೆ ವೆಚ್ಚ, ಬಿದ್ದು ಜಖಂಗೊಂಡ ವಾಹನಗಳ ರಿಪೇರಿ ಖರ್ಚು ಕೊಡಬೇಕು’.

‘ದಿನಾ ಸಾಯುವವರಿಗೆ ಅಳಲಾಗುವುದಿಲ್ಲ, ಗುಂಡಿಯಲ್ಲಿ ಬೀಳದಂತೆ ಜನ ಎಚ್ಚರಿಕೆಯಿಂದ ಓಡಾಡಬೇಕು’.

‘ಗುಂಡಿರಹಿತ ರಸ್ತೆ ನಿರ್ಮಾಣ ಸಾಧ್ಯವಿಲ್ಲವೇನ್ರೀ?’

‘ಮೂಗು ಇರೋವರೆಗೂ ನೆಗಡಿ, ರಸ್ತೆ ಇರೋವರೆಗೆ ಗುಂಡಿ ಕಾಟ ತಪ್ಪುವುದಿಲ್ಲ’.

‘ಹಾಗಲ್ಲಾರೀ, ಬೆಂಗಳೂರಿನಲ್ಲಿ ಕಟ್ಟಿರುವ ಕಟ್ಟಡಗಳ ಸೈಜುಗಲ್ಲುಗಳಿಗಾಗಿ ಅದೆಷ್ಟೋ ಬೆಟ್ಟಗಳು ಕರಗಿಹೋಗಿವೆ. ನಿರಂತರವಾಗಿ ಬಾಯಿಬಿಡುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಜಲ್ಲಿಗಾಗಿ ಇನ್ನೆಷ್ಟು ಬೆಟ್ಟಗಳನ್ನು ಪುಡಿ ಮಾಡಬೇಕಾಗುವುದೋ, ಗಿಡ ಹಾಕಿ ಮರ ಬೆಳೆಸಿದಂತೆ ಕಲ್ಲು ನೆಟ್ಟು ಬೆಟ್ಟ ಬೆಳೆಸಲು ಸಾಧ್ಯವಿಲ್ಲವಲ್ಲ...’

‘ಆಧುನಿಕತೆ, ಅಭಿವೃದ್ಧಿಗಾಗಿ ಬೆಟ್ಟಗುಡ್ಡಗಳನ್ನು ಪುಡಿ ಮಾಡುವುದು ಅನಿವಾರ್ಯ’.

‘ಇರುವ ಬೆಟ್ಟಗಳೆಲ್ಲಾ ಖಾಲಿಯಾದ ಮೇಲೆ ಏನು ಮಾಡೋದು?’

‘ಆತಂಕ ಪಡಬೇಡ, ಹಿಮಾಲಯದಂಥ ಪರ್ವತಗಳಿವೆ, ಅವು ನಮ್ಮನ್ನು ಕಾಪಾಡುತ್ತವೆ...’ ಶಂಕ್ರಿ ಸಮಾಧಾನ ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.