ADVERTISEMENT

ಚುರುಮುರಿ: ಇದುವೇ ಭಾಗ್ಯ!

ಸುಮಂಗಲಾ
Published 6 ಜುಲೈ 2025, 23:42 IST
Last Updated 6 ಜುಲೈ 2025, 23:42 IST
---
---   

‘ಇದು ಭಾಗ್ಯ, ಇದು ಭಾಗ್ಯವಯ್ಯಾ’ ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು.

‘ಎಂಥಾ ಭಾಗ್ಯ… ಯಾರಿಗೆ ಭಾಗ್ಯ’ ನನಗೆ ಅಚ್ಚರಿಯಾಯಿತು.  

‘ಸಿದ್ದು ಅಂಕಲ್ಲಿಗೆ ಸಿಎಂ ಕುರ್ಚಿ ಭಾಗ್ಯ ಇನ್ನೂ ಮೂರು ವರ್ಷಕ್ಕೆ ಪಕ್ಕಾ ಆಗೈತಿ. ಉಳಿದವರಿಗೂ ಅವರವರ ಕುರ್ಚಿ ಭಾಗ್ಯ ಮುಂದುವರೀತೈತೆ. ಮಂತ್ರಿಮಹೋದಯರ ಅಧಿಕಾರ ಭಾಗ್ಯವೇ ಶ್ರೀಸಾಮಾನ್ಯರ ಸೌಭಾಗ್ಯವಯ್ಯಾ!’ ಬೆಕ್ಕಣ್ಣ ಕಣಿ ನುಡಿಯಿತು.

ADVERTISEMENT

‘ಅಲ್ಲಲೇ… ದೇವನಹಳ್ಳಿ- ಚನ್ನರಾಯಪಟ್ಟಣದಲ್ಲಿ 1,777 ಎಕರೆ ಭೂಸ್ವಾಧೀನಕ್ಕೆ ಮುಂದಾಗ್ಯಾರೆ. ರೈತರ ಅನ್ನ ಕಸಿದುಕೊಂಡರೆ, ಅವರಿಗೆಲ್ಲಿಯ ಭಾಗ್ಯ’ ಎಂದೆ ಸಿಟ್ಟಿನಿಂದ. 

‘ಪಾಟೀಲ ಅಂಕಲ್ಲು ಅವರ ಸ್ವಂತಕ್ಕೆ ಮಾಡಾಕೆ ಹತ್ತಿಲ್ಲ! ಅಷ್ಟ್‌ ದೊಡ್‌ ಏರೊಸ್ಪೇಸ್‌ ಪಾರ್ಕ್ ಮಾಡಿದರೆ ರಾಜ್ಯಕ್ಕೆ ಬಂಡವಾಳ ಬರತೈತೆ… ಕೈಗಾರಿಕಾ ಪ್ರಗತಿ ಆಗತೈತೆ… ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುತಿರುಗಿ ನೋಡತೈತೆ’ ಬೆಕ್ಕಣ್ಣ ಕನಸುಗಣ್ಣಿನಿಂದ ವಿವರಿಸಿತು.

‘ಅದು ಛಲೋ ಫಲವತ್ತಾಗಿರೋ ಭೂಮಿ. ರೈತರು ತರಕಾರಿ, ಹಣ್ಣುಹಂಪಲು, ಹೂವು ಬೆಳೀತಾರೆ ಅಲ್ಲಿ… ಏರೊಸ್ಪೇಸ್‌ ಬಂಜರು ನೆಲದಾಗೆ ಮಾಡಬೇಕು’.

‘ರೈತರಿಗೆ ಪರಿಹಾರ ಕೊಡ್ತಾರೇಳು’.

‘ಕೋಟಿಗಟ್ಟಲೆ ಬೆಲೆಬಾಳೋ ಜಮೀನಿಗೆ ಬರೇ ಎಂಬತ್ತು ಲಕ್ಷ ಕೊಡ್ತಾರಂತೆ. ಹತ್ತಾರು ಸಲ ಅಲೆದಾಡಿಸಿ ಅರ್ಧಂಬರ್ಧ ಕೊಡತಾರೆ, ಅದ್ರಾಗೂ ಬ್ರೋಕರ್‌ಗಳಿಗೆ ಲಂಚ ಕೊಡಬೇಕು’ ಎಂದೆ ಬೇಸರದಿಂದ.  

‘ಎಲ್ಲಾನೂ ಒಕ್ಕಣ್ಣಿನಿಂದ ನೋಡಬ್ಯಾಡ! ಇಮಾನ ಕಂಪನಿಗಳಿಂದ ಉದ್ಯೋಗಾವಕಾಶ, ಕೈಗಾರಿಕಾ ಪ್ರಗತಿ, ತಾಂತ್ರಿಕ ಅಭಿವೃದ್ಧಿ, ಬಂಡವಾಳದ ಹರಿವು ಹೆಚ್ಚಾಗತೈತಿ’.

‘ರೈತರಿಗೇನು ಭಾಗ್ಯ ಸಿಗತೈತೆ?’

‘ಅವರಿಗೂ ಏರೊಸ್ಪೇಸ್‌ ಕಂಪನಿಗಳಲ್ಲಿ ಚಪರಾಸಿ ಕೆಲಸ, ಹೌಸ್‌ಕೀಪಿಂಗ್‌ ಕೆಲಸ, ಸೆಕ್ಯುರಿಟಿ ಕೆಲಸ ಕೊಡತಾರಲ್ಲ... ಇನ್ನೇನು ಬೇಕು?’

‘ಮಂಗ್ಯಾನಂಥವನೇ... ಹೊಲಕ್ಕೆ ಮಾಲೀಕರಾಗಿರಾಗಿದ್ದವರು ಚಪರಾಸಿ ಆಗಬೇಕನಲೇ? ಫಲವತ್ತಾದ ಭೂಮಿಯನ್ನ ಕಾರ್ಪೊರೇಟ್‌ ಕುಳಗಳಿಗೆ ಕೊಟ್ಟು, ಮಂತ್ರಿಗಳು ಆಮೇಲೆ ಹೊಟ್ಟಿಗೇನು ತಿಂತಾರಂತೆ?’ ನಾನು ಗುರ್‌ ಎಂದೆ. ಬೆಕ್ಕಣ್ಣ ಬಾಲ ಮುದುರಿ ಗಪ್ಪಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.