ADVERTISEMENT

ಚುರುಮುರಿ: ಪ್ರಮೀಳೆ ಮತ್ತು ಪಾಲಿಟಿಕ್ಸ್!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 19:31 IST
Last Updated 7 ಏಪ್ರಿಲ್ 2021, 19:31 IST
   

ಫುಲ್ ಖುಷಿಯಲ್ಲಿದ್ದ ಹೋಂ ಮಿನಿಸ್ಟರ್, ಆಟಿಕೆ ಪಿಸ್ತೂಲನ್ನು ನನ್ನೆಡೆಗೆ ಗುರಿಯಿಟ್ಟು ‘ಹ್ಯಾಂಡ್ಸಪ್’ ಎಂದರು.

ನಾನು ‘ನೆಲ ಒರೆಸಿ, ಪಾತ್ರೆ ತೊಳೆದು, ಬಟ್ಟೆ ಒಗೆದು ಕೈ ಬಿದ್ದು ಹೋಗಿದೆ. ಎತ್ತೋಕಾಗಲ್ಲ ಮೇಡಂ’ ಎಂದೆ.

‘ನೀವು ಕೈಲಾಗದ ಗಂಡಸ್ರು. ಅದಕ್ಕೇ ಚೀನಾ, ಪಾಕಿಸ್ತಾನ ಹಾಗೆ ನಮ್ಮ ಮೇಲೇರಿ ಬರ್ತಿರೋದು’.

ADVERTISEMENT

‘ಹೌದಮ್ಮ, ನಾವೇನೋ ಕೈಲಾಗದೋರು. ಕೈಲಾಗೋ ನೀವ್ಯಾಕೆ ರಣರಂಗಕ್ಕಿಳೀಬಾರದು?’

‘ಆ ಕಾಲ ಈಗ ಬಂದಿದೆ. ಪೇಪರ್ ನೋಡ್ರಿಲ್ಲಿ’ ಎಂದು ಪತ್ರಿಕೆ ಮುಂದೆ ಹಿಡಿದಳು. ಭಾರತೀಯ ಸೇನೆಗೆ ಪ್ರಮೀಳಾ ಪಡೆ ಎಂಬ ಶೀರ್ಷಿಕೆಯಡಿ ವಿವರಗಳಿದ್ದವು.

‘ಇದುವರೆಗೆ ಸೇನೆಯಲ್ಲಿ ಅಧಿಕಾರಿಗಳಾಗಿ ಮಾತ್ರ ನಮ್ಗೆ ಅವಕಾಶವಿತ್ತು. ಈಗ ಸೈನಿಕರಾ ಗಿಯೂ ಸೇರಬೌದು. ಮುಂದಿನ ತಿಂಗಳು ನಮ್ಮ ಮೊದಲ ಮಹಿಳಾ ಪಡೆ ಸೈನ್ಯ ಸೇರ್ತಿದೆ’.

‘ಹಾಗಾದ್ರೆ ನೀರಸ ಸೈನಿಕ ಜೀವನದಲ್ಲಿ ಹೊಸ ಹುರುಪು, ಹುಮ್ಮಸ್ಸು ಮೂಡುತ್ತೇನ್ನು’.

‘ಷಟಪ್, ನಿಮ್ದು ಚೀಪ್ ಜೋಕ್... ಸೈನ್ಯಕ್ಕೆ ಆಯ್ಕೆ ಆಗಿರೋರಲ್ಲಿ ನಮ್ಮವರು ಎಂಟು ಯುವತಿಯರಿದಾರೆ. ಎಲ್ರೂ ಕಲ್ಯಾಣ ಕರ್ನಾಟಕ ದೋರು. ಅಲ್ದೆ ಕರಾವಳಿಯ ಮೂವರು ಹುಡುಗೀರು ಬಿಎಸ್ಎಫ್‌ಗೆ ಸೆಲೆಕ್ಟ್ ಆಗಿದಾರೆ’.

‘ಅದೇನು ಹಾಗೆ?’

‘ಅವ್ರ ಬಹುತೇಕ ಮನೆಗಳಲ್ಲಿ ಸೇನೆಗೆ ಸೇರಿದವರಿದಾರಂತೆ. ಅವರದು ವಂಶಪರಂಪರಾಗತ ದೇಶಸೇವೆ’.

‘ನಮ್ಮ ದಕ್ಷಿಣ ಕರ್ನಾಟಕದಲ್ಲೂ ವಂಶಪರಂಪರಾಗತ ದೇಶಸೇವೆ ಮಾಡೋರಿದಾರಲ್ಲ’

‘ಅಂದ್ರೆ?’

‘ನಮ್ಮ ರಾಜಕೀಯದಲ್ಲಿ ತಾತ, ಮಗ, ಸೊಸೆ, ಮೊಮ್ಮಕ್ಕಳು ಎಲ್ಲರೂ ಮಾಡ್ತಿರೋದು ಕಡಿಮೆ ದೇಶಸೇವೆನಾ? ಇದು ಯುದ್ಧ ಭೂಮೀಲಿ ಸಲ್ಲಿಸೋ ಸೇವೆಗಿಂತ ಕಷ್ಟದಾಯಕ. ಅಲ್ಲಿ ಶತ್ರುಗಳು ಯಾರೂಂತ ಗೊತ್ತಿರುತ್ತೆ. ಇಲ್ಲಿ ಶತ್ರುಗಳು, ಮಿತ್ರರು ಅದಲು ಬದಲಾಗ್ತಿರ್ತಾರೆ!

‘ಹಾಗಾದ್ರೆ ಕಲ್ಯಾಣ, ಕರಾವಳಿ, ದಕ್ಷಿಣ ಕರ್ನಾಟಕಗಳನ್ನ ಆಗಾಗ ಇಂಟರ್‌ಚೇಂಜ್‌ ಮಾಡ್ತಿದ್ರೆ ಹೇಗೆ?’

‘ಹೌದ್ಹೌದು, ಆಗ ಪ್ರತ್ಯೇಕ ಕರ್ನಾಟಕ, ಉತ್ತರ ಕರ್ನಾಟಕದ ಕೂಗು ಇರೋಲ್ಲ!’ ಎಂದು ನಾನು ಕಣ್ಣು ಹೊಡೆದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.