ADVERTISEMENT

ಚುರುಮುರಿ: ಬೆಕ್ಕಣ್ಣನ ಹಾರಾಟ

ಸುಮಂಗಲಾ
Published 28 ಆಗಸ್ಟ್ 2022, 19:31 IST
Last Updated 28 ಆಗಸ್ಟ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಲೆಗಳು ಆರಂಭವಾಗುತ್ತಿದ್ದಂತೆ ಬೆಕ್ಕಣ್ಣ ‘ಡೆಲ್ಲಿವಳಗ ಸಿಸೋಡಿಯಾ ಅಂಕಲ್ಲು ಸರ್ಕಾರಿ ಶಾಲೆಗಳನ್ನ ಹ್ಯಾಪಿನೆಸ್ ಸ್ಕೂಲು ಮಾಡ್ಯಾರಂತ, ನನಗ ಅಲ್ಲಿಗೇ ಸೇರಿಸು’ ಎಂದು ವರಾತ ಹಚ್ಚಿತ್ತು.

‘ಅಲ್ಲಿ ಯಾರ ಮನ್ಯಾಗ ಇರ್ತೀ... ನಿರ್ಮಲಕ್ಕನ ಮನ್ಯಾಗ ಇಟ್ಕಂತಾರೇನೂ ನಿನಗ’ ಎಂದು ಬೈದಿದ್ದೆ.

‘ಅಲ್ಲಿ ಎಷ್ಟ್ ಚಂದ ಓದಬೌದಿತ್ತು’ ಎಂದು ಆಗಾಗ ಕ್ಯಾತೆ ತೆಗೆಯುತ್ತಲೇ ಇತ್ತು. ಸಿಸೋಡಿಯಾ ಮೇಲೆ ಇ.ಡಿ ದಾಳಿ ಶುರುವಾಗಿದ್ದೇ ‘ಹ್ಯಾಪಿನೆಸ್ಸು ಸ್ಕೂಲು ಬ್ಯಾಡ, ಇಲ್ಲೇ ಹೋಗತೀನಿ ಬಿಡು’ ಎಂದು ಸುಮ್ಮನಾಗಿತ್ತು.

ADVERTISEMENT

ಮೊನ್ನೆ ‘ನನಗ ಪಾಸ್‌ಪೋರ್ಟು, ವೀಸಾ ತೆಗೆಸಿಕೊಡು. ಮೇಲುಕೋಟೆ ಪುಟ್ಟರಾಜು ಅಂಕಲ್ಲು ಹಲ್ಲುನೋವು ತೋರಿಸ್ಕೆಳಾಕ ಲಂಡನ್ನಿಗೆ ಹೋಗ್ತಾರಂತ. ನಾನೂ ಹೋಗಿ ಲಂಡನ್ನಿನ ಪುಸ್ಸಿಕ್ಯಾಟ್ ನೋಡಿಕೆಂಡು ಬರತೀನಿ’ ಎಂದು ದುಂಬಾಲು ಬಿದ್ದಿತು.

‘ನೀ ನನ್ ಜೋಡಿ ಚುರುಮುರಿಗೆ ವಗ್ಗರಣೆ ಹಾಕ್ತೀಯಲ್ಲ, ಅದಕ್ಕ ನಿನಗ ಪಾಸ್‌ಪೋರ್ಟು, ವೀಸಾ ಏನೂ ಕೊಡಂಗಿಲ್ಲ. ಹಂಗೆಲ್ಲ ಜುಜುಬಿ ಹಲ್ಲುನೋವಿಗೂ ಲಂಡನ್ ಆಸ್ಪತ್ರೆಗೆ ಹೋಗಬೇಕು ಅಂದ್ರ ನೀ ರಾಜಕಾರಣಿಯಾಗಿರಬೇಕು, ನಿನ್ ಮ್ಯಾಗೆ ಭ್ರಷ್ಟಾಚಾರದ ಆಪಾದನೆ ಇರಬೇಕು, ಆವಾಗ... ವಿದೇಶ ಪ್ರವಾಸ ಮಾಡಬೌದು’ ಎಂದೆ.

‘ಏನೂ ಬ್ಯಾಡೇಳು’ ಎಂದು ಮೂತಿ ಉಬ್ಬಿಸಿ ಪೇಪರು ಓದತೊಡಗಿತು. ತುಸುಹೊತ್ತು ಬಿಟ್ಟು ‘ಬುಲ್‌ಬುಲ್ ಹಕ್ಕಿ ಅಂದ್ರ ಅದ್ ಪಕ್ಷಿನೋ ಅಥವಾ ಪುಷ್ಪಕವಿಮಾನನೋ?’ ಎಂದು ಕೇಳಿತು.

‘ಬುಲ್‌ಬುಲ್ ಅಂದ್ರ ಹಕ್ಕಿ, ಅದ್ಹೆಂಗೆ ವಿಮಾನ ಆಗತೈತಿ’.

‘ಮತ್ತ ಅಂಡಮಾನ್ ಜೈಲಿಂದ ಒಬ್ಬರು ಹಕ್ಕಿಮ್ಯಾಗೆ ಕುಂತು ಹಾರಿಬರತಿದ್ರಂತ... ನಾನೂ ಹಂಗೇ ಹಕ್ಕಿ ಮ್ಯಾಗೆ ಕುಂತು ಹಾರತೀನಿ’ ಎಂದು ಬೆಕ್ಕಣ್ಣ ಹೇಳುವಷ್ಟರಲ್ಲಿ ದೊಡ್ಡ ಪಾರಿವಾಳವೊಂದು ಬಾಲ್ಕನಿಯೊಳಗೆ ಬಂತು. ಬೆಕ್ಕಣ್ಣ ಚಂಗನೆ ಅದರ ರೆಕ್ಕೆಯ ಮೇಲೆ ಜಿಗಿದು, ‘ನೋಡು’ ಎಂದು ನಗುವಷ್ಟರಲ್ಲಿ ಪಾರಿವಾಳ ರೆಕ್ಕೆ ಕೊಡವಿ ಹಾರಿ ಹೋಯಿತು. ಕೆಳಗೆ ಬಿದ್ದ ಬೆಕ್ಕಣ್ಣ ಮೀಸೆಗೆ ಹತ್ತಿದ ಮಣ್ಣನ್ನು ಕೊಡವುತ್ತ ಹುಳ್ಳಗೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.