ADVERTISEMENT

ಚುರುಮುರಿ: ಪೋಸ್ಟರ್ ಫೈಟ್

ಮಣ್ಣೆ ರಾಜು
Published 27 ಸೆಪ್ಟೆಂಬರ್ 2022, 19:31 IST
Last Updated 27 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ, ಒಡವೆ ಅಂಗಡಿಯಲ್ಲಿ ದಸರಾ ಆಫರ್ ಅನೌನ್ಸ್ ಮಾಡಿದ್ದಾರೆ...’ ಸುಮಿ ಸಡಗರಗೊಂಡಳು.

‘ಒಂದು ಒಡವೆ ಕೊಂಡರೆ ಇನ್ನೊಂದು ಫ್ರೀ ಅಂತಾ?’ ಶಂಕ್ರಿ ಕೇಳಿದ.

‘ಅಲ್ಲಾರೀ, ಸೆಲ್ಫಿ ಫ್ರೀ ಆಫರ್. ಅಂಗಡಿಯಲ್ಲಿ ನಮಗೆ ಬೇಕಾದ ಒಡವೆ ಧರಿಸಿ ಸೆಲ್ಫಿ ತಗೋಬಹುದು, ಸಾಮರ್ಥ್ಯ ಇದ್ದರೆ ಕೊಳ್ಳಬಹುದು’ ಆಭರಣ ಮಳಿಗೆಯ ಪ್ರಚಾರ ಪೋಸ್ಟರ್ ತೋರಿಸಿದಳು.

ADVERTISEMENT

‘ರಾಜಕೀಯ ಪೋಸ್ಟರ್‌ಗಿಂತ ಒಡವೆ ಅಂಗಡಿ ಪೋಸ್ಟರ್ ಅಪಾಯಕಾರಿ’.

‘ಒಡವೆ ಧರಿಸಿ ಫೋಟೊ ತೆಗೆದು ಪದ್ಮಾಳಿಗೆ ಪೋಸ್ಟ್ ಮಾಡಿ ಅವಳ ಹೊಟ್ಟೆ ಉರಿಸಬೇಕು’.

‘ಯಾಕೆ ಉರಿಸ್ತೀಯಾ ಅವಳು ನಿನ್ನ ಫ್ರೆಂಡ್ ಅಲ್ವಾ?’

‘ನಾವು ಜಗಳವಾಡಿಕೊಂಡು ಮುನಿಸಿಕೊಂಡಿದ್ದೀವಿ, ಎದುರು ಸಿಕ್ಕರೂ ಮಾತನಾಡಿಸಲ್ಲ, ನಮ್ಮ ನಡುವೆ ಪೋಸ್ಟರ್ ಫೈಟ್ ನಡೆಯುತ್ತಿದೆ’.

‘ಪೋಸ್ಟರ್ ಫೈಟ್ ಅನ್ನೋದು ಡರ್ಟಿ ಪಾಲಿಟಿಕ್ಸ್...’

‘ಮೊನ್ನೆ ಅವಳು ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುವ ಫೋಟೊ ಪೋಸ್ಟರ್ ಹಾಕಿದ್ದಳು, ನಾನು ದೊಡ್ಡ ಹೋಟೆಲ್‍ನಲ್ಲಿ ಊಟ ಮಾಡುವ ಫೋಟೊ ಹಾಕಿ ಸೇಡು ತೀರಿಸಿಕೊಂಡೆ’.

‘ಹೌದೆ?! ವೆರಿಗುಡ್... ಏನೇ ಆಗಲಿ, ಫೋಟೊ ಫೈಟ್ ಆರೋಗ್ಯಕರ ಜಗಳ. ಫೈಟರ್‌ಗಳಿಗೆ ಗಾಸಿಯಾಗಲ್ಲ, ಗಾಯವಾಗಲ್ಲ. ಕೆಟ್ಟ ಮಾತು ಬೈಯ್ಯುವಂತಿಲ್ಲ, ಆದರೂ ಪೋಸ್ಟರ್ ಹಾಕಿ ಅವರ ಮಾನ ಕಳೆಯಬಹುದು, ನೆಮ್ಮದಿ ಹಾಳು ಮಾಡಬಹುದು... ಇನ್ಮೇಲೆ ನೀನು ಅಕ್ಕಪಕ್ಕದ ಮನೆಯವರಿಗೆ ಕೇಳಿಸುವಂತೆ ಜೋರು ಜಗಳ ಮಾಡಬೇಡ, ನನ್ನ ವಾಟ್ಸ್‌ಆ್ಯಪ್‍ಗೆ ಬೈಯ್ಯುವ ಪೋಸ್ಟರ್ ಹಾಕಿ ಸಿಟ್ಟು ಶಮನ ಮಾಡಿಕೊ’.

‘ನೀವೂ ಹಾಗೇ ಮಾಡಿ, ನೆರೆಹೊರೆಯವರಿಗೆ ಕೇಳಿಸುವಂತೆ ಕೂಗಾಡಿ ನನಗೆ ನೋವು ಮಾಡಿ ನೀವೂ ಬೆಲೆ ಕಳಕೊಳ್ಳಬೇಡಿ’.

‘ಎಲ್ಲರೂ ಪೋಸ್ಟರ್ ಫೈಟ್ ಕಲ್ಚರ್ ರೂಢಿಸಿಕೊಂಡರೆ ಮೌನಕ್ರಾಂತಿ ನಡುವೆಯೂ ಸಂಸಾರದ ಮಾನ, ಶಾಂತಿ ಕಾಪಾಡಿಕೊಳ್ಳ
ಬಹುದು ಅಲ್ವಾ?...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.